• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ತುಳುವರ ಸಂಘದ ಉದ್ಘಾಟನೆ ಹಾಗೂ ಕೆಡ್ಡಸ ಕೂಟ

ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಹೊಸದಾಗಿ ರಚನೆಯಾದ ತುಳುವರ ಸಂಘದ ಉದ್ಘಾಟನೆ ಹಾಗೂ ಕೆಡ್ಡಸಕೂಟ ಕಾರ್ಯಕ್ರಮವನ್ನು ದಿ. 12/02/2025 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೆಡ್ಡಸದ ಮೂರನೇ ದಿನದಂದು ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಪ್ರಕಾರವಾಗಿ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಉದ್ಘಾಟಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕರು, ಕಳಸೆಗೆ ಭತ್ತವನ್ನು ತುಂಬುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸುತ್ತಾ ಕೆಡ್ಡಸ ಆಚರಣೆ ಒಂದು ವೈಜ್ಞಾನಿಕ ಕಾರ್ಯಕ್ರಮ. ಸಂದರ್ಭದಲ್ಲಿ ಭೂಮಿತಾಯಿಗೆ ನೋವು ಕೊಡುವ ಯಾವುದೇ ಕೆಲಸಗಳನ್ನು ಮಾಡಬಾರದು ಎಂಬುದಾಗಿ ನುಡಿಯುತ್ತಾ ಒಳ್ಳೆಯ ದಿನದಂದು ಕಾಲೇಜಿನಲ್ಲಿ ಪ್ರಾರಂಭಗೊಂಡ ತುಳು ಸಂಘ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ಬರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ| ರಾಜೇಶ್ ಬೆಜ್ಜಂಗಳಕಾರ್ಯದರ್ಶಿಗಳು, ತುಳಕೂಟ ಪುತ್ತೂರು, ಮಾತನಾಡುತ್ತಾತುಳು ನಮ್ಮ ಮನಸ್ಸಿನ ಭಾಷೆ, ಬದುಕಿನ ಭಾಷೆ. ತುಳುವರ ವೈಶಿಷ್ಟ್ಯ ಎಂದರೆ ಭೂಮಿ ಮತ್ತು ತಿಂಡಿ ತಿನಿಸುಗಳು ತುಳುನಾಡಿನ ಆಚರಣೆಗಳು ಹಾಗೂ ನಂಬಿಕೆಗಳು ತುಂಬಾ ಅಪಾರವಾದವುಗಳು ಎಂದು ವಿಸ್ತಾರವಾಗಿ ವಿವರಿಸುತ್ತಾ ದೇವರು ಮತ್ತು ಮನುಷ್ಯರ ನಡುವೆ ಇರುವ ದೈವ ಶಕ್ತಿಗಳು ನಮ್ಮ ಬಯಕೆಗಳನ್ನು ಈಡೇರಿಸುತ್ತವೆ ಎಂಬ ನಂಬಿಕೆ ನಮ್ಮದು ತುಳುವಿನ ಸಿರಿ ಪಾಡ್ದನವು ಅತ್ಯಂತ ಸಮೃದ್ಧ ಸಾಹಿತ್ಯವನ್ನು ಹಾಗೂ ಸಂಸ್ಕೃತಿಯನ್ನು ಹೊಂದಿರುವಂತದ್ದಾಗಿದೆ ಇದು ತಲೆತಲಾಂತರದಿಂದ ಬಾಯಿಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಬಂದ ಹಾಡಾಗಿದೆ ಇದನ್ನು ಉಳಿಸಿ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ ತುಳು ಸಂಘದ ಮೂಲಕ ನಮ್ಮ ಆಚಾರ ವಿಚಾರಗಳನ್ನು ಬೆಳೆಸೋಣ” ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ನ್ಯಾಯವಾದಿ ತೇಜಸ್ ನಾಯಕ್ ಪುತ್ತೂರು ಮಾತನಾಡುತ್ತಾಸಿರಿ ಸಿಂಗಾರದಿಂದ ಕೂಡಿದ ನಾಡು ನಮ್ಮ ತುಳುವರ ನಾಡು ಮಣ್ಣಿನ ಆಚಾರ ವಿಚಾರಗಳನ್ನು ತಿಳಿಸುವ ದಿನ ಕೆಡ್ಡಸ ದಿನ ತುಳುನಾಡಿನ ಮಣ್ಣಿಗೂ ಕೂಡ ತುಂಬಾ ಪ್ರಾಮುಖ್ಯತೆ ಇದೆ. ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಹೋಗುತ್ತದೆ ಎಂಬುದು ಕೆಡ್ಡಸ ಕೂಟದ ದಿನದ ಮಹತ್ವ. ತುಳುವರಾದ ನಾವು ನಮ್ಮ ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ಕೆಡ್ಡಸ ಆಚರಣೆಯಲ್ಲಿ ನಮಗೂ ಭೂಮಿಗೂ ಒಂದು ಬಾಂಧವ್ಯವಿದೆ, ಪ್ರೀತಿ ಇದೆ. ಪ್ರಕೃತಿಯನ್ನು ಆಚರಣೆ ಮಾಡುವ ವಿಶೇಷವಾದ ದಿನ ಕೆಡ್ಡಸದ ದಿನ, ಭೂಮಿತಾಯಿಯನ್ನು ನಾವು ಯಾವ ರೀತಿ ಆರಾಧನೆ ಮಾಡುತ್ತೇವೆ ರೀತಿ ಭೂಮಿ ತಾಯಿಯು ನಮ್ಮನ್ನು ಸಲಹುತ್ತಾಳೆ ಎಂಬುದು ತುಳುವರ ನಂಬಿಕೆ. ಸೂರ್ಯ ಚಂದ್ರ ಇರುವವರೆಗೂ ನಮ್ಮ ಸಂಸ್ಕೃತಿ ಉಳಿಯಬೇಕು ಎಂಬ ನಂಬಿಕೆ ನಮ್ಮದು. ಹಬ್ಬದ ಮೂರು ದಿನದ ಆಚರಣೆಗಳನ್ನು ವಿಷದವಾಗಿ ತಿಳಿಸುತ್ತಾ ಇದನ್ನು ಅರ್ಥಪೂರ್ಣವಾಗಿ ಆಚರಿಸೋಣ ನಮ್ಮ ಬದುಕು ಸುಂದರವಾಗಲಿ” ಎಂದು ಶುಭನುಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ – ಅಧ್ಯಕ್ಷರು, ಕಾಲೇಜಿನ ಆಡಳಿತ ಮಂಡಳಿ, ಮಾತನಾಡುತ್ತಾನಮ್ಮ ಸಂಸ್ಥೆಯಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಡ್ಡಸದ ಕೂಟವನ್ನು ಹಮ್ಮಿಕೊಳ್ಳಲಾಗಿದೆ ನಮ್ಮ ಊರಿನ ಸಂಸ್ಕೃತಿ ಆಚರಣೆ ಆಹಾರ ಕ್ರಮಕ್ಕೆ ಗೌರವ ಕೊಡುವುದನ್ನು ಮಾಡಿದಲ್ಲಿ ಅದು ರಾಷ್ಟ್ರಕ್ಕೆ ಶಕ್ತಿ ತುಂಬುವ ಕಾರ್ಯವನ್ನು ಮಾಡಿದಂತಾಗುತ್ತದೆ ಇಂತಹ ಚಟುವಟಿಕೆಗಳು ನಿರಂತರವಾಗಿ ಸಂಸ್ಥೆಯಲ್ಲಿ ನಡೆಯಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳ ಸ್ವಾಗತವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುರಳೀಧರ್ ಯಸ್ ಮಾಡುತ್ತಾಪ್ರಕೃತಿಯ ಗಿಡ ಮರ ಕಲ್ಲಿನಲ್ಲೂ ದೇವರನ್ನು ಕಂಡು ಪೂಜಿಸುವ ತುಳುನಾಡಿನ ಸಂಸ್ಕೃತಿ ವಿಭಿನ್ನ” ಎಂದರು.

ತುಳಕೂಟ ಪುತ್ತೂರಿನ ಅಧ್ಯಕ್ಷರಾದ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ತುಳುಕೂಟ 1973 ರಿಂದ ಪ್ರಾರಂಭವಾಗಿ ನಡೆದು ಬಂದ ಪರಿಯನ್ನು ಪ್ರಸ್ತಾವಿಕವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ತುಳುಸಂಘದ ಅಧ್ಯಕ್ಷ ಪ್ರಥಮ್ ದ್ವಿತೀಯ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಕಾರ್ಯದರ್ಶಿ ಶರಣ್ ಶೆಟ್ಟಿ ದ್ವಿತೀಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಜೊತೆ ಕಾರ್ಯದರ್ಶಿಯಾಗಿ ವಿನೀತ್ ದ್ವಿತೀಯ ಆಟೋಮೊಬೈಲ್ ಇಂಜಿನಿಯರಿಂಗ್ ಇವರು ಉಪಸ್ಥಿತರಿದ್ದರು. ಹಾಗೂ ತುಳುಕೂಟದ ಉಪಾಧ್ಯಕ್ಷರಾದ ನ್ಯಾಯವಾದಿ ಹೀರಾ ಉದಯ್, ಜತೆಕಾರ್ಯದರ್ಶಿ ನಯನಾ ರೈ, ನಿರ್ದೇಶಕರಾದ ಅಬುಬಕ್ಕರ್ ಮುಲಾರ್, ಹಿರಿಯರಾದ ವೆಂಕಟರಮಣ ಗೌಡ ಕಳುವಾಜೆ, ಪ್ರೊ. ದತ್ತಾತ್ರೇಯ ರಾವ್, ರಾಜಾರಾಮ ನೆಲ್ಲಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.ಆಡಳಿತ ಮಂಡಳಿಯ ಸದಸ್ಯರಾದ ರವಿ ಮುಂಗ್ಲಿ ಮನೆ ಉಪನ್ಯಾಸಕರು ಉಪನ್ಯಾಸಕೇತರ ವರ್ಗದವರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ತೃಪ್ತಿ, ಸುಜನ್ಯ ಮತ್ತು ಭವ್ಯ ಪ್ರಾರ್ಥಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ತುಳು ಸಂಘದ ಅಧ್ಯಕ್ಷರಾದ ಪ್ರಥಮ್ ವಂದಿಸಿದರು. ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಉಷಾ ಬೋಧಕರು ಕಾರ್ಯಕ್ರಮವನ್ನು ಆಯೋಜಿಸಿದರು.

Highslide for Wordpress Plugin