ಪುತ್ತೂರು:ವಿವೇಕಾನಂದ ಪಾಲಿಟೆಕ್ನಿಕ್ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿದಾಯ ಸಮಾರಂಭ ದಿನಾಂಕ 17-06-2023 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಾತನಾಡುತ್ತಾ “ಈಗ ಸಮಾಜವು ನಿಮ್ಮ ತಪ್ಪು ಒಪ್ಪುಗಳನ್ನು ಸ್ವೀಕರಿಸುವ ಸಮಯ. ಇದನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತ ನಾಗರಿಕರಂತೆ ನಡೆದುಕೊಳ್ಳಿ, ನಿಮ್ಮ ಕೌಶಲ್ಯದಿಂದ ನೀವು ಗುರುತಿಸಿಕೊಳ್ಳುವವರಾಗಿ” ಎಂದು ಹಿತವಚನ ನುಡಿದರು.
ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಜಯಂತಿ ನಾಯಕ್ ಮಾತನಾಡುತ್ತಾ “ಆವಿಷ್ಕಾರಗಳನ್ನು ತಿಳಿದುಕೊಳ್ಳುವ ಸಂಸ್ಕಾರವನ್ನು ಬೆಳೆಸಿಕೊಂಡು, ಕೆಟ್ಟ ಚಟಗಳಿಗೆ ಬಲಿಯಾಗದೆ ಶ್ರದ್ಧೆ, ಪ್ರಾಮಾಣಿಕತೆಯಿಂದ ಬಾಳಿ” ಎಂದು ಹರಸಿದರು.
ಆಡಳಿತ ಮಂಡಳಿಯ ಇನ್ನೋರ್ವ ಸದಸ್ಯರಾದ ರವಿ ಮುಂಗ್ಲಿಮನೆ ಮಾತನಾಡುತ್ತಾ “ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿದೆ, ಕಲಿತ ವಿದ್ಯೆಯ ಪ್ರಯೋಜನ ಪಡೆದು, ಸ್ವಂತ ಉದ್ಯೋಗ ನಡೆಸಿ ಬೇರೆಯವರಿಗೂ ಉದ್ಯೋಗ ನೀಡುವಂತವರಾಗಿ” ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ “ಭವಿಷ್ಯವನ್ನು ರೂಪಿಸುವಾಗ ನನ್ನ ಹೋರಾಟ ನಾನೇ ಮಾಡಬೇಕು ಎಂದು ಅಂದುಕೊಂಡಾಗ ಯಶಸ್ಸು ಸಿಗುತ್ತದೆ. ನಿಮಗಾಗಿ ನೀವು ಬದುಕಿ” ಎಂದು ಹೇಳುತ್ತಾ ಶುಭನುಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಜಯಲಕ್ಷ್ಮಿ, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕಿ ನೆರವೇರಿಸಿದರು. ಭಾಗವಹಿಸಿದ ಎಲ್ಲರನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ವಿಭಾಗ ಮುಖ್ಯಸ್ಥರು ಹಾಗೂ ಉಪನ್ಯಾಸಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳೀಧರ್ ಎಸ್ ವಂದನಾರ್ಪಣೆ ಸಲ್ಲಿಸಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.