10-07-2013ರಂದು ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಿಕ್ಷಕ -ರಕ್ಷಕ ಸಮಾವೇಶ ಕಾರ್ಯಕ್ರಮ ಗಣಹೋಮದೊಂದಿಗೆ ಪ್ರಾರಂಭವಾಯಿತು. ಕೇಶವ ಸಂಕಲ್ಪದಲ್ಲಿ ನಡೆದ ಈ ಸಮಾವೇಶದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಗೋಪಿನಾಥ್ ಶೆಟ್ಟಿಯವರು ಸ್ವಾಗತಿಸಿದರು.
ಸಂಸ್ಥೆಯ ಸ್ಥಾಪಕ ಸಂಚಾಲಕರು ಹಾಗೂ ಪುತ್ತೂರಿನ ಮಾಜಿ ಶಾಸಕಾರಾದ ಶ್ರೀಯುತ ಕೆ ರಾಮ ಭಟ್ ಉರಿಮಜಲು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ‘ವಿವೇಕಾನಂದರ ಆದರ್ಶವನ್ನು ಬೆಳೆಸಿಕೊಳ್ಳುವುದೇ ನಿಜವಾದ ವಿದ್ಯಾಬ್ಯಾಸ. ಜೊತೆಗೆ ಸದ್ಬುದ್ಧಿಗಳನ್ನು ಬೆಳೆಸಿಕೊಂಡು ದೇಶದ ಚಿಂತನೆಯನ್ನು ಮಾಡುವಂತಹ ಸತ್ಪ್ರಜೆಯಾಗಿ ಮೂಡಿ ಬನ್ನಿ’ ಎಂದು ವಿದ್ಯಾರ್ಥಿಗಳಿಗೆ ಸಂದೇಶವನ್ನು ಕೊಟ್ಟು ಶುಭಹಾರೈಸಿದರು.
ಪಾಲಿಟೆಕ್ನಿಕ್‌ನ ಸಂಚಾಲಕರಾದ ಶ್ರೀ ಮುರಳೀಧರ್ ಭಟ್ ಇವರು ವಿಷವಿರುವ ಚಿನ್ನದ ಪಾತ್ರೆಗಿಂತ ಹಾಲು ಇರುವ ಮಣ್ಣಿನ ಮಡಕೆ ಉತ್ತಮ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬಂದು ಉತ್ತಮ ಜೀವನವನ್ನು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎ.ವಿ.ನಾರಾಯಣರವರು ವಿದ್ಯಾರ್ಥಿಗಳು ಮೊಬೈಲ್, ಅಂತರ್ಜಾಲ, ಟಿ.ವಿ. ಗಳಿಂದ ದೂರ ಇದ್ದು, ಒಳ್ಳೆಯ ಆಸಕ್ತಿ, ಆಲೋಚನೆ ಹಾಗೂ ಶ್ರದ್ಧಾಭಕ್ತಿಗಳನ್ನು ಮೈಗೂಡಿಸಿ ಸತ್ಪ್ರಜೆಗಳಾಗಿ ಬಾಳಿ ಭವ್ಯ ಭಾರತದ ಆಸ್ತಿಗಳಾಗುವಂತೆ ಕರೆಕೊಟ್ಟರು.
ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಶ್ರೀರಾಧಾಕೃಷ್ಣ ಭಕ್ತ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಇ. ಶಿವಪ್ರಸಾದ್, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗುಣಪಾಲ್ ಜೈನ್, ಶ್ರೀ ಅಗರ್ತಬೈಲ್ ಕೃಷ್ಣ ನಾಯ್ಕ, ಶ್ರೀ ಬಿ.ಎಂ. ಹರೀಶ್ಚಂದ್ರ ಮುಗೆರೋಡಿ, ಶ್ರೀ ಕೆ.ಟಿ.ಮುರಳಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ಬಿ. ಹರೇಕೃಷ್ಣ ಭಾಗವಹಿಸಿದ್ದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್ ನಿರೂಪಿದ ಈ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ಚಂದ್ರಕುಮಾರ್ ವಂದಿಸಿದರು.