• 08251 231197
  • vptputtur@yahoo.co.in

ಶ್ರೀ ಗೋಪಿನಾಥ ಶೆಟ್ಟಿಯವರಿಗ ಭಾವಪೂರ್ಣ ಶ್ರದ್ಧಾಂಜಲಿ.

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 1987 ರಿಂದ 1990 ರವರೆಗೆ 3 ವರ್ಷಗಳ ಕಾಲ ಉಪನ್ಯಾಸಕರಾಗಿ ಹಾಗೂ 1990 ರಿಂದ 2022 ರವರೆಗೆ 32 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಹಿರಿಮೆಯನ್ನು ಎತ್ತಿಹಿಡಿದ ದಕ್ಷ, ಪ್ರಾಮಾಣಿಕ ಹಾಗೂ ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ಗೋಪಿನಾಥ ಶೆಟ್ಟಿಯವರು ಅಕಾಲಿಕವಾಗಿ ದಿನಾಂಕ 13-03-2024ರಂದು ದೈವಾಧೀನರಾದರು. ಅವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘ, ಫಾರ್ಮಸಿ ಕಾಲೇಜು ಹಾಗೂ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು.
ಸಭೆಗೆ ಆಗಮಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಹಿತೈಷಿಗಳು, ಒಡನಾಡಿಗಳು ಹಾಗೂ ಅಧ್ಯಾಪಕ, ಅಧ್ಯಾಪಕೇತರ ಬಂಧುಗಳು ಶ್ರೀಯುತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡುತ್ತಾ, “ಸಂಘದ ಒಳಗಿರುವ ವ್ಯಕ್ತಿಗಳಲ್ಲಿರುವಂತಹ ಶಿಸ್ತು, ಶ್ರದ್ಧೆ, ಸೇವೆ ಸಮರ್ಪಣಾ ಗುಣಗಳನ್ನು ಹೊಂದಿದ ವ್ಯಕ್ತಿಯಾದ ಶ್ರೀ ಗೋಪಿನಾಥ ಶೆಟ್ಟಿಯವರು ಹಿರಿಯರಾದ ಶ್ರೀ ರಾಮಭಟ್ಟರ ಆಶಯದಂತೆ ಈ ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ತನ್ನನ್ನು ತಾನು ತಯಾರಿ ಮಾಡಿಕೊಂಡು ನಡೆದು ವಿವೇಕಾನಂದ ಪಾಲಿಟೆಕ್ನಿಕ್ ಜಿಲ್ಲೆಯ ಅತ್ಯುತ್ತಮ ಕಾಲೇಜು ಎಂಬುದಾಗಿ ರೂಪಿಸುವಲ್ಲಿ ಸಫಲರಾಗಿದ್ದರು. ವಿವೇಕಾನಂದ ಕ್ಯಾಂಪಸ್‌ನಲ್ಲಿರುವ ಪ್ರತಿಯೊಂದು ಕಟ್ಟಡದಲ್ಲೂ ಅವರ ಹೆಜ್ಜೆ ಗುರುತುಗಳಿವೆ. ಸಂಸ್ಥೆಯ ಎಲ್ಲಾ ನಿರ್ಧಾರಗಳಿಗೂ ಸಹಕರಿಸುತ್ತಾ ದೇವರ ಕೆಲಸಗಳಿಗೂ ಕೈಜೋಡಿಸುತ್ತಾ ತಪಸ್ವಿಯಂತೆ ನಿಷ್ಠೆಯಿಂದ ಸಂಸ್ಥೆಗೆ ದುಡಿದಿದ್ದಾರೆ. ಬಹಳ ಅಪರೂಪದ ವ್ಯಕ್ತಿತ್ವದವರಾಗಿದ್ದರು. ಸೇವಾ ನಿವೃತ್ತಿಯ ನಂತರ ಸಂಸ್ಥೆಯ ಹಿರಿಯರ ಕೇಳಿಕೆಯಂತೆ ಫಾರ್ಮಸಿ ಕಾಲೇಜಿನ ಅಧ್ಯಕ್ಷರಾಗಿ ಅ ಜವಾಬ್ದಾರಿಯನ್ನೂ ಕೂಡಾ ಹೊಂದಿದ್ದರು. ಯಾವುದೇ ಸಂದರ್ಭದಲ್ಲಿಯೂ ಭಯ ಎಂಬುದು ಅವರಿಗಿರಲಿಲ್ಲ. ಸಮರ್ಪಣೆ ಸೇವಾ ಮನೋಭಾವ ಪಕ್ಷಕ್ಕೆ ನಿಷ್ಠನಾಗಿರುವ ಗುಣ ಮುಂತಾದವುಗಳನ್ನು ಗುರುತಿಸಿ ಅವರನ್ನು ಪುತ್ತೂರು ನಗರದ ಸಹಸಂಘಚಾಲಕರಾಗಿ ಕೂಡಾ ನೇಮಕ ಮಾಡಿದ್ದರು. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಪತ್ನಿ ಪುತ್ರರಿಗೆ ಆ ನೋವನ್ನು ಭರಿಸುವ ಶಕ್ತಿಯನ್ನು ಕೊಟ್ಟು ಸಮಾಜಕ್ಕೋಸ್ಕರ ಬದುಕುವ ಶಕ್ತಿಯನ್ನು ಕರುಣಿಸಲಿ” ಎಂದು ತಮ್ಮ ನುಡಿಗಳ ಮೂಲಕ ನಮನವನ್ನು ಸಲ್ಲಿಸಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ, “ವಿವೇಕಾನಂದ ಪಾಲಿಟೆಕ್ನಿಕ್‌ನ ರೂವಾರಿಯಾಗಿ ಇದರ ಹೆಸರನ್ನು ಜಿಲ್ಲೆಯಾದ್ಯಂತ ವಿಸ್ತಾರ ಮಾಡುವ ಕೀರ್ತಿಯನ್ನು ಪಡೆದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿಯವರು ಈ ಸಂಸ್ಥೆಯಲ್ಲಿ 35 ವರ್ಷಗಳ ಕಾಲ ದುಡಿದಿದ್ದಾರೆ. ಆನಿರೀಕ್ಷಿತವಾಗಿ ಶಿವನ ಪಾದವನ್ನು ಸೇರಿದ ಇವರಿಗೆ ಸದ್ಗತಿ ಲಭಿಸಲಿ ಹಾಗೂ ಅವರ ಮನೆಯವರಿಗೆ ಶೋಕವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ತಮ್ಮ ನಮನವನ್ನು ಸಲ್ಲಿಸಿದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಮಾತನಾಡುತ್ತಾ, “ ಆತ್ಮೀಯ ಗೆಳೆಯರಾದ ಶ್ರೀಯುತರು ಕಾಲೇಜಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಹಾಗೂ ಉನ್ನತಿಯನ್ನು ಹೊಂದುವಲ್ಲಿ ಸಫಲರಾಗಿದ್ದಾರೆ.” ಎಂದರು. ಸಿವಿಲ್ ವಿಭಾಗ ಮುಖ್ಯಸ್ಥರಾದ ರವಿರಾಂ ಮಾತನಾಡುತ್ತಾ, “ಗೋಪಿನಾಥ ಶೆಟ್ಟಿಯವರು ಜೊತೆಯಾಗಿ ಕೆಲಸಮಾಡಿಕೊಂಡಿದ್ದರು ಹಾಗೂ ಉತ್ತಮ ಒಡನಾಡಿಯಾಗಿದ್ದರು. ಶಿಸ್ತಿನ ಸಿಪಾಯಿಯಾಗಿದ್ದರೂ ಆಂತರ್ಯದಲ್ಲಿ ಶ್ರೀಮಂತರಾಗಿದ್ದರು. ಸಂಸ್ಥೆಯ ಏಳಿಗೆಯನ್ನೇ ಬಯಸುತ್ತಿದ್ದರು. ಕಾಲೇಜಿನಲ್ಲಿ ಹೇಗೆ ಇರುತ್ತಿದ್ದರೋ ಅದಕ್ಕೆ ತದ್ವಿರುದ್ಧವಾಗಿ ಹೊರಗೆ ಬೆರೆಯುತ್ತಿದ್ದ ಅವರು ವಿಭಿನ್ನ ವ್ಯಕ್ತಿತ್ವದವರಾಗಿದ್ದರು. ಸುಧೀರ್ಘ ಅವಧಿಯಲ್ಲಿ ಅವರು ಹಣ ಗಳಿಕೆಯನ್ನು ಮಾಡಲೇ ಇಲ್ಲ. ಕೊಡುಗೈ ದಾನಿಯಾಗಿದ್ದರು. ಸ್ನೇಹಜೀವಿ ಹಾಗೂ ಕಾಳಜಿಯ ವ್ಯಕ್ತಿತ್ವ ಅವರದಾಗಿತ್ತು. ಅಂತೆಯೇ ಶಿಸ್ತಿಗೆ ಹೆಸರಾಗಿದ್ದರು. ವಿವೇಕಾನಂದ ಕ್ಯಾಂಪಸ್‌ನ ಎಲ್ಲಾ ಕಟ್ಟಡಗಳ ರೂವಾರಿಯಾಗಿದ್ದರು. ಜೊತೆಯಲ್ಲಿ ಬಂದವರನ್ನು ಒಳ್ಳೆಯ ರೀತಿಯಲ್ಲಿ ಕರೆದುಕೊಂಡೋಗುವ ಗುಣ ಅವರಲ್ಲಿತ್ತು. ಎಲ್ಲರ ಏಳಿಗೆ ಬಯಸುವ ಮನಸ್ಸು ಅವರಲ್ಲಿತ್ತು. ಈ ಕಾಲೇಜಿಗೆ ಒಳ್ಳೆಯ ಹೆಸರನ್ನು ಪಡೆಯುವಲ್ಲಿ ಅವರ ಪಾತ್ರ ಮಹತ್ವದ್ದು ಎಂದರು.
ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳೀಧರ್ ಯಸ್. ಮಾತನಾಡುತ್ತಾ “ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿ ಸಾರ್ಥಕ ಜೀವನವನ್ನು ನಡೆಸಿದ ಶ್ರೀಯುತರು ಹೆಚ್ಚಿನ ಸಮಯವನ್ನು ಕಾಲೇಜಿಗೆ ಸಮರ್ಪಣೆ ಮಾಡಿದ್ದಾರೆ. ಅವರ ಶಿಸ್ತು, ಸಮಯ ಪರಿಪಾಲನೆ ಗಂಭೀರತೆ ಎಲ್ಲವೂ ಆದರ್ಶಪ್ರಾಯ. ಸಂಸ್ಥೆಯ ಹಾಗೂ ಅಲ್ಲಿರುವವರು ಏಳಿಗೆಯನ್ನು ಕಾಣಬೇಕೆಂದು ಬಯಸಿ ರಾಜ್ಯಕ್ಕೇ ಮಾದರಿ ಸಂಸ್ಥೆಯನ್ನಾಗಿ ನಿರೂಪಿಸುವಲ್ಲಿ ಅವರ ಹಿರಿಮೆ ಅಪಾರ. ದೇವರು ಅವರಿಗೆ ಚಿರಶಾಂತಿ ಕೊಡಲಿ” ಎಂದು ಪ್ರಾರ್ಥಿಸಿದರು.
ಪುತ್ತೂರು ಪುರಸಭಾ ಸದಸ್ಯರಾದ ಶ್ರೀ ಜೀವಂದರ ಜೈನ್ ಮಾತನಾಡುತ್ತಾ, “ಅನೇಕ ಸಂದರ್ಭಗಳಲ್ಲಿ ಉತ್ತಮ ಮಾರ್ಗದರ್ಶನ ನೀಡಿ ಕಷ್ಟಕಾಲದಲ್ಲಿ ಪರಿಹಾರ ನೀಡುತ್ತಿದ್ದರು. ಹಾಗೂ ಸಂಸ್ಥೆಯ ಪರವಾಗಿ ಮಾತನಾಡುತ್ತಿದ್ದರು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿತ್ವ ಅವರದಾಗಿತ್ತು.” ಎಂದು ತಮ್ಮ ನೆನಪನ್ನು ಹಂಚಿಕೊಂಡರು.
ಪಾಲಿಟೆಕ್ನಿಕ್‌ನ ನಿಕಟಪೂರ್ವ ಸಂಚಾಲಕರಾಗಿದ್ದ ಮುರಳೀಧರ ಭಟ್ ಬಂಗಾರಡ್ಕ ಮಾತನಾಡುತ್ತಾ “ಒಬ್ಬ ಉತ್ತಮ ಶಿಕ್ಷಕನಾಗಿ ವಿದ್ಯಾರ್ಥಿಯನ್ನು ಉನ್ನತ ಮಟ್ಟಕ್ಕೆ ಏರಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಶಿಸ್ತುಬದ್ಧವಾಗಿ ಕೆಲಸಮಾಡುತ್ತಿದ್ದರು. ಬೆಳ್ಳಿಹಬ್ಬದ ಸಂದರ್ಭದಲ್ಲಿ ಎಲ್ಲಾ ಕಾರ್ಯಗಳು ವಿಜ್ರಂಭಣೆಯಿಂದ ನಡೆಯಲು ಸಹಕಾರಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ” ಎಂದು ನುಡಿದರು.
ಕಾಲೇಜಿನ ಮಾಜಿ ಅಧ್ಯಕ್ಷರಾಗಿದ್ದ ಬಲರಾಮ್ ಆಚಾರ್ಯರು ಮಾತನಾಡುತ್ತಾ, “ಅವರು ಬಿಟ್ಟು ಹೋದ ಸ್ಥಳವನ್ನು ತುಂಬಿಸಲಿಕ್ಕಾಗುವುದಿಲ್ಲ. ಆಡಳಿತ ಮಂಡಳಿಯವರು ಹೇಳಿದ ಯಾವುದೇ ಕೆಲಸವನ್ನಾದರೂ ಮಾಡುತ್ತಿದ್ದರು. ಕಷ್ಟ ಸಾಧ್ಯವಾದ್ದನ್ನು ವಿವರಿಸಿ ತಿಳಿಸುತ್ತಿದ್ದರು. ಇದು ತುಂಬಾ ಅಪರೂಪದ ಗುಣ. ಅವರ ಬದ್ಧತೆ ಸ್ಮರಣೀಯ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ”ಎಂದರು.
ಫಾರ್ಮಸಿ ಕಾಲೇಜಿನ ಸಂಚಾಲಕರಾದ ಗೋವಿಂದ ಪ್ರಕಾಶ್ ಸಾಯ ಮಾತನಾಡುತ್ತಾ, “ ಶ್ರೀರಾಮನ ದರ್ಶನಕ್ಕೆ ಹೊರಟವರು ಶ್ರೀರಾಮನ ಪಾದವನ್ನೇ ಸೇರಿದರು. ಓರ್ವ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ತಮ್ಮ ಅಪಾರ ಅನುಭವವನ್ನು ಕಾಲೇಜಿಗೆ ಕೊಡುವ ಉದ್ದೇಶದಿಂದ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನು ಬೆಳೆಸುವ ಆಶಯವನ್ನು ಹೊಂದಿದ್ದ ನಮಗೆ ಇದು ತುಂಬಲಾರದ ನಷ್ಟ. ಫಾರ್ಮಸಿ ಕಾಲೇಜಿನ ಪ್ರತಿಯೊಂದು ಕಂಬ ಗೋಡೆಗಳಲ್ಲೂ ಅವರ ಪರಿಶ್ರಮವನ್ನು ನಾವು ಕಾಣುತ್ತಿದ್ದೇವೆ. ಅವರ ಆತ್ಮಕ್ಕೆ ತೃಪ್ತಿ ಕೊಡುವ ಜವಾಬ್ದಾರಿಯನ್ನು ನಾವು ಖಂಡಿತಾ ನಿಭಾಯಿಸುತ್ತೇವೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಹಾಗೂ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ಅವರ ಮನೆಯವರಿಗೆ ಭಗವಂತನು ನೀಡಲಿ” ಎಂದು ಹೇಳಿದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪಸನ್ನಭಟ್ ಮಾತನಾಡುತ್ತಾ, “ ಕೊರೋನಾ ಸಂದರ್ಭದಲ್ಲಿ ಶ್ರೀ ಗೋಪಿನಾಥ ಶೆಟ್ಟಿಯವರು ಮುಖ್ಯ ರೂವಾರಿಯಾಗಿ ಕೆಲಸಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ” ಎಂದರು.
ACCEI ಪುತ್ತೂರು ಘಟಕದ ಅಧ್ಯಕ್ಷರಾದ ಪ್ರಮೋದ್ ಮಾತನಾಡುತ್ತಾ “ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಅವರ ದೃಷ್ಟಿ ಹಾಗೂ ಕೊಡುಗೆ ತುಂಬಾ ಇದೆ. ನಮ್ಮ ಕ್ಷೇತ್ರಕ್ಕೆ ಅವರ ಅಗಲುವಿಕೆ ತುಂಬಾ ನಷ್ಟ ತಂದಿದೆ. ಅವರ ದೂರದೃಷ್ಟಿಯಂತೆ ನಾವು ನಡೆದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿದಂತಾಗುತ್ತದೆ. ಭಗವಂತನು ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ನೀಡಲಿ” ಎಂದರು.
ರೆಡ್‌ಕ್ರಾಸ್ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥರಾದ ಪ್ಯಾಟ್ರಿಕ್ ಮಸ್ಕರೇನಸ್ ಮಾತನಾಡುತ್ತಾ, “ಈ ಸಂಸ್ಥೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಚಟುವಟಿಕೆಗಳನ್ನು ಆಯೋಜಿಸಲು ಸಂಪೂರ್ಣ ಬೆಂಬಲವನ್ನು ನೀಡಿದ್ದರು. ಬಹಳ ಅಚ್ಚುಕಟ್ಟಾಗಿ ನಡೆಸಲು ಸಹಾಯ ಮಾಡಿದ್ದಾರೆ.” ಎಂದು ನುಡಿದರು.
ಅನಿಲ ದೀಪಕ್ ರೈ ಮಾತನಾಡುತ್ತಾ “ಈ ಸಂಸ್ಥೆಯು ರಾಷ್ಟ್ರೀಯ ಜನೌಷಧಿ ಪರಿಯೋಜನೆಯಡಿ 12 ಜನೌಷಧಿ ಕೇಂದ್ರಗಳನ್ನು ಶ್ರೀ ಗೋಪಿನಾಥ ಶೆಟ್ಟಿಯವರ ಮುಂದಾಳತ್ವದಲ್ಲಿ ಸ್ಥಾಪಿಸಿದೆ. ಅನೇಕ ಸಂದರ್ಭಗಳಲ್ಲಿ ಉತ್ತಮ ಮಾರ್ಗದರ್ಶನವನ್ನು ನೀಡಿ ಸಹಕರಿಸಿದ್ದಾರೆ.” ಎಂದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ನಿಕಟಪೂರ್ವ ಸದಸ್ಯರಾದ ಸೂರ್ಯನಾಥ ಆಳ್ವ ಮಾತನಾಡುತ್ತಾ “ಗೋಪಿನಾಥ ಶೆಟ್ಟಿಯವರು ಹೃದಯ ಶ್ರೀಮಂತರಾಗಿದ್ದರು. ಶಿಸ್ತು ಆತ್ಮೀಯತೆಗೂ ಹತ್ತಿರವಾಗಿದ್ದರು. ಪುತ್ತೂರಿನ ಅನೇಕ ಕಟ್ಟಡದ ರೂವಾರಿಯಾಗಿದ್ದರು. ಯಾವತ್ತೂ ದುಡ್ಡಿನ ಆಸೆಗೆ ಕೆಲಸ ಮಾಡಿದವರಲ್ಲ ಹಾಗೂ ಕೊಡುಗೈ ದಾನಿಯಾಗಿದ್ದರು. ಈ ವಿದ್ಯಾಸಂಸ್ಥೆಗೆ ಅವರ ಅಗಲುವಿಕೆ ತುಂಬಲಾರದ ನಷ್ಟ. ಅವರಿಗೆ ಹಾಗೂ ಮನೆಯವರಿಗೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದರು.
ಕೊನೆಯದಾಗಿ ಸಹವರ್ತಿಯಾಗಿದ್ದ ನಾರಾಯಣ ಬೈಪಡಿತ್ತಾಯರು ಮಾತನಾಡುತ್ತಾ, “21 ವರ್ಷ ನನ್ನ ಒಡನಾಡಿಯಾಗಿದ್ದು, ನನ್ನೊಳಗಿನ ಚರ್ಚೆ, ಸಿಟ್ಟು ಮೊದಲಾದವುಗಳಿಗೆ ಕಡಿವಾಣ ಹಾಕುತ್ತಿದ್ದ ಆತ್ಮೀಯ ವ್ಯಕ್ತಿ. ಅಗಲಿದ ಅವರ ಆತ್ಮಕ್ಕೆ ದೇವರು ಚಿರಶಾಂತಿ ಕೊಟ್ಟು ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ನಮಗೆಲ್ಲರಿಗೂ ಕೊಡಲಿ” ಎಂದರು.
ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Highslide for Wordpress Plugin