• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ದಿನಾಂಕ 10-03-2024ರಂದು ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ನಡೆಸಲಾಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಕೊಂಕೋಡಿ ಕೃಷ್ಣಭಟ್ ಅವರು ಹಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಗ್ರಾಮಾಂತರದಲ್ಲಿ ಶೈಕ್ಷಣಿಕ ಕ್ರಾಂತಿಯ ರೀತಿಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬೆಳವಣಿಗೆಯಾಗಿದೆ. ವಿವೇಕಾನಂದ ಪಾಲಿಟೆಕ್ನಿಕ್ ನೈಪುಣ್ಯ ಶಿಬಿರ, ಜನೌಷಧಿ ಕೇಂದ್ರಗಳನ್ನು ತೆರೆಯುವುದು ಮುಂತಾದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಗ್ರಾಮದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಕೇಂದ್ರ ಈ ಸಂಸ್ಥೆಯಿಂದಾಗಬೇಕು. ಈ ರೀತಿ ನಾವು ಎಲ್ಲಾ ಕೋನಗಳಿಂದಲೂ ಸಂಸ್ಥೆಯನ್ನು ಬೆಳೆಸುವ ನಿರ್ಧಾರ ಮಾಡಬೇಕು. ನೀವು ಕೂಡಾ ಅದರ ಭಾಗವಾಗಬೇಕು.” ಎಂದು ಆಶಯ ನುಡಿಗಳನ್ನಾಡಿದರು.
ಹಿರಿಯ ವಿದ್ಯಾರ್ಥಿ ರವೀಂದ್ರ ರೈ ಮಾತನಾಡುತ್ತಾ “ಹಳೆಯ ನೆನಪುಗಳನ್ನು ಬಿಚ್ಚಿಟ್ಟಾಗ ನಾವು ಮತ್ತೊಮ್ಮೆ ವಿದ್ಯಾರ್ಥಿಯಾಗುತ್ತೇವೆ. ಶಿಕ್ಷಣ ಸಂಸ್ಥೆಯ ಶಕ್ತಿ ಅಲ್ಲಿಯ ವಿದ್ಯಾರ್ಥಿಗಳು. ಶಕ್ತಿ ಆಸ್ತಿಯಾಗಿ ಬದಲಾಗಬೇಕು. ಬದುಕಿಗೆ ದಾರಿ ಹಾಗೂ ದಿಕ್ಕನ್ನು ಕೊಟ್ಟ ಸಂಸ್ಥೆಗೆ ನಮ್ಮಿಂದ ಆಗುವ ಸಹಾಯ ಮಾಡಬೇಕು” ಎಂದರು. ಅದೇ ರೀತಿ ಊರು, ಪರವೂರುಗಳಿಂದ ಆಗಮಿಸಿದ ಅನೇಕ ಹಿರಿಯ ವಿದ್ಯಾರ್ಥಿಗಳಾದ ಜಗನ್ನಿವಾಸ ರಾವ್, ಅಜೇಯ ಪೈ, ಅರುಣ್ ಕುಮಾರ, ಶಶಿರಾಜ್, ಯಂ.ವಿ. ಭಟ್, ಜಾಸ್ಮಿನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯನ್ನು ರಾಷ್ಟ್ರೀಯ ಮಾನ್ಯತಾ ಆರ್ಹತಾ ಪಟ್ಟಿಗೆ ಒಳಪಡಿಸುವ ಪ್ರಕ್ರಿಯೆಯ ಅಂಗವಾಗಿ ಸಂಸ್ಥೆಯ ‘ವಿಷನ್ ಹಾಗೂ ಮಿಷನ್’ ಅನ್ನು ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು ಹಾಗೂ ಅವರಿಂದ ಸಂಪೂರ್ಣ ಸಹಕಾರವನ್ನು ಆಶಿಸಲಾಯಿತು. ಆ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ರಚನೆಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಅರುಣ್ ಕುಮಾರ್, ಉಪಾಧ್ಯಕ್ಷರಾಗಿ ಶಶಿರಾಜ್, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟೇಶ್ವರ ಭಟ್ ಮಿತ್ತೂರು, ಜೊತೆ ಕಾರ್ಯದರ್ಶಿಗಳಾಗಿ ಜಗನ್ನಿವಾಸ್ ರಾವ್ ಹಾಗೂ ವಿನ್ಯಾಸ್, ಗೌರವ ಸಲಹೆಗಾರರಾಗಿ ರವೀಂದ್ರ ರೈ, ಸೋಶಿಯಲ್ ಮೀಡಿಯಾ ಇನ್ಚಾರ್ಜ್ ಸುನಿಲ್ ಹಾಗೂ ಸದಸ್ಯರುಗಳಾಗಿ ಗಿರೀಶ್, ಉಮೇಶ್, ಅನ್ವಿತಾ ಮತ್ತು ನಿಶಾನ್ ನೂತನ ಪದಾಧಿಕಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡರು.
ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ, “ದೇಶದ ಪರಿವರ್ತನೆ ಗ್ರಾಮೀಣ ಭಾರತದಲ್ಲಿ ಆಗಬೇಕು. ಗ್ರಾಮೀಣ ಪ್ರದೇಶದ ಸಾಮಾನ್ಯ ವಿದ್ಯಾರ್ಥಿಗೆ ಕೌಶಲ್ಯಭರಿತ ಶಿಕ್ಷಣವನ್ನು ನೀಡುವುದು ಪಾಲಿಟೆಕ್ನಿಕ್ ವಿದ್ಯೆಯಿಂದ ಮಾತ್ರವೇ ಸಾಧ್ಯವಾಗುತ್ತದೆ. ಅದು ಸಮಾಜ ಸೇವೆಯ ಒಂದು ಲಾಂಛನ ಎಂದು ಪರಿಗಣಿಸಬಹುದು. ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಸಿಗುವ ಮೌಲ್ಯಯುತ ಶಿಕ್ಷಣದ ಜೊತೆಗೆ ಆಧುನಿಕತೆಯ ಅನಿವರ‍್ಯತೆಯೂ ಇದೆ. ಈ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸಲು ಹಿರಿಯ ವಿದ್ಯಾರ್ಥಿಗಳ ಸಹಕಾರ ಬೇಕಾಗಿದೆ” ಎಂದು ತಮ್ಮ ಆಶಯವನ್ನು ನುಡಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಾತನಾಡುತ್ತಾ, “ಬದಲಾಗುವ ಪಠ್ಯಕ್ರಮಕ್ಕೆ ಪೂರಕವಾಗಿ ಹೆಚ್ಚಿನ ಅಭಿವೃದ್ಧಿಯಾಗಬೇಕಾಗುತ್ತದೆ. ಈ ಕಾರ್ಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಾಯ ಸಹಕಾರ ನಮಗೆ ಅಗತ್ಯ.” ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಈಶ್ವರಚಂದ್ರ, ಶ್ರೀ ರವಿ ಮುಂಗ್ಲಿಮನೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ ಪ್ರಾಸ್ತಾವಿಕ ಮಾತನಾಡಿದರು. ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ್ ಯಸ್. ಕಾಲೇಜಿನ ವಿಷನ್ ಮತ್ತು ಮಿಷನ್‌ನ್ನು ಅನಾವರಣಗೊಳಿಸುವಲ್ಲಿ ಸಹಕರಿಸಿದರು. ಪ್ರಾರ್ಥನೆಯನ್ನು ಕಾಲೇಜಿನ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಹಿರಿಯ ಉಪನ್ಯಾಸಕಿ ಹಾಗೂ ಹಿರಿಯ ವಿದ್ಯಾರ್ಥಿನಿಯಾದ ಶ್ರೀಮತಿ ಜಯಲಕ್ಷ್ಮಿ ನೆರವೇರಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಶ್ರೀ ವಿಷ್ಣುಮೂರ್ತಿ ವಂದನಾರ್ಪಣೆ ಗೈದರು. ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಉಷಾಕಿರಣ ಕಾರ್ಯಕ್ರಮ ನಿರೂಪಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿರಾಂ ಕಾರ್ಯಕ್ರಮ ಆಯೋಜಿಸಿದರು.

 

Highslide for Wordpress Plugin