• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ.

“ಒಬ್ಬ ವ್ಯಕ್ತಿ ನಾಯಕತ್ವದ ಗುಣವನ್ನು ತೋರಿಸಬೇಕಾದರೆ ವಿಷಯದ ಬಗ್ಗೆ ಅರಿವು ಮತ್ತು ಧೈರ್ಯ ಬೆಳೆಸಿಕೊಳ್ಳಬೇಕು”-ಕ್ಯಾಪ್ಟನ್ ಬ್ರಿಜೇಶ್‌ ಚೌಟ.

ಪುತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪ್ರತಿವರ್ಷದಂತೆ ದಿನಾಂಕ 24-11-2023 ರಂದು ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ “ಪ್ರಸ್ತುತ ಕೌಶಲ್ಯ ಅಭಿವೃದ್ದಿ ಪ್ರತಿಯೊಬ್ಬನಿಗೂ ಬೇಕಾದ ವಿಷಯ. ಯಾವುದೇ ವ್ಯಕ್ತಿಗೆ ಜೀವನದಲ್ಲಿ ದೃಷ್ಟಿಕೋನ, ನಿರಂತರತೆ, ಉತ್ಸಾಹ ಇವು ಮೂರೂ ಇದ್ದಾಗ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ಆದ್ದರಿಂದ ನೀವು ಕೀಳರಿಮೆಯನ್ನು ಬಿಟ್ಟು ಉತ್ಸಾಹದಿಂದ ಕೆಲಸವನ್ನು ಮಾಡಿ” ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಹಾರೈಸಿದರು. ಈ ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಎ.ವಿ.ನಾರಯಣ್ ಪ್ರಸ್ತುತ ಎ.ವಿ.ಜಿ. ಶಿಕ್ಷಣ ಸಂಸ್ಥೆಯ ಮಾಲಿಕರು ಇವರು ಮಾತನಾಡುತ್ತಾ “ವಿನಯತೆ ಹಾಗೂ ವಿಧೇಯತೆ ನಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಬಲ್ಲುದು, ವೃತ್ತಿಪರ ಶಿಕ್ಷಣ ಆಯ್ಕೆಯ ಜೊತೆ ನಾನು ಗುರಿಯನ್ನು ಮುಟ್ಟುತ್ತೇನೆ ಎನ್ನುವ ಆತ್ಮವಿಶ್ವಾಸವಿರಬೇಕು” ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ವಹಿಸಿದ್ದರು. ಇವರು ಮಾತನಾಡುತ್ತಾ “ಉತ್ತಮ ಆದರ್ಶಗಳನಿಟ್ಟುಕೊಂಡು ಶಿಸ್ತಿನಿಂದ ಜೀವನವನ್ನು ಮಾಡಿ” ಎಂದು ಶುಭಹಾರೈಸಿದರು. ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕರಾದ ಮಣಿಲ ಸಿ. ಮಹದೇವಶಾಸ್ತ್ರಿ ಇವರು ಮಾತನಾಡುತ್ತಾ “ನೇರ ನಿರ್ಣಯಗಳನ್ನು ತೆಗೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ” ಎಂದು ಶುಭಹಾರೈಸಿದರು.
ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡ ಈ ಕಾರ್ಯಕ್ರಮವು, ವಿದ್ಯಾರ್ಥಿಯರಾದ ಜಿತೇಶ್, ದಿನೇಶ್, ಹಿತೇಶ್ ಇವರ ಪ್ರಾರ್ಥನೆ ನಂತರ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಬಾಗಧಿಕಾರಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮುರಳೀಧರ್.ಎಸ್ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಚಂದ್ರಕುಮಾರ್ ಪಾಲಿಟೆಕ್ನಿಕ್‌ನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳ ಸ್ಪರ್ಧೆಗಳಲ್ಲಿ ಮತ್ತು ಕಲಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ, ಹಾಗೂ ಸದಸ್ಯರುಗಳಾದ ರವಿಮುಂಗ್ಲಿಮನೆ, ಉಷಾಭಟ್ ಮುಳಿಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪುಷ್ಪಾ.ಬಿ.ಎನ್. ಹಾಗೂ, ಶಿಕ್ಷಕ ಶಿಕ್ಷಕೇತರ ವರ್ಗದವರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಹಾಗೂ ವಿದ್ಯಾರ್ಥಿವೃಂದದವರು ಸಮಾರಂಭದಲ್ಲಿ ಭಾಗವಹಿಸಿದರು.
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿಯಾದ ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾದ ಕೀರ್ತನ್ ಧನ್ಯವಾದ ಸಮರ್ಪಣೆ ಮಾಡಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Highslide for Wordpress Plugin