ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭ ವಿದಾಯ ಕಾರ್ಯಕ್ರಮವನ್ನು ನಡೆಸಲಾಯಿತು. ಭಾರತ ಮಾತೆಗೆ ಪುಷ್ಪಾರ್ಚನೆ ಗೈಯುವ ಮೂಲಕ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಭಟ್ ಕೊಂಕೋಡಿ ಮಾತನಾಡುತ್ತಾ, ಮೊಟ್ಟೆಯಿಂದ ಹೊರಬಂದ ಮರಿ ಹೇಗೆ ತನ್ನಷ್ಟಕ್ಕೆ ತಾನೇ ಬದುಕಲು ಕಲಿಯುತ್ತದೋ ಹಾಗೆ ಜೀವನದ ಸವಾಲುಗಳನ್ನು ಎದುರಿಸಿ ಯಶಸ್ಸಿನ ಮೆಟ್ಟಲುಗಳನ್ನು ಏರುವುದು ಹೇಗೆ ಎಂಬುದನ್ನು ನೀವು ಕಲಿಯಬೇಕಾಗಿದೆ. ಸೋಲಿನಿಂದ ಗೆಲುವಿನ ಮೆಟ್ಟಲುಗಳನ್ನು ಕಟ್ಟಿಕೊಳ್ಳಬೇಕು ಎನ್ನುವ ಪೇರಣೆ ನಿಮ್ಮದಾಗಲಿ. ಬದುಕನ್ನು ಗಂಭೀರವಾಗಿ ಸ್ವೀಕರಿಸಿ ನಿರ್ಧಾರ ಮಾಡುವ ಸಮಯ ನಿಮ್ಮದು. ಸರಿಯಾದ ನಿರ್ಧಾರದಿಂದ ಜೀವನ ಸುಖಮಯವಾಗುತ್ತದೆ. ಜೀವನದ ಚದುರಂಗದಾಟಕ್ಕೆ ಸಿದ್ಧರಾಗಿ ಕೀರ್ತಿ ತನ್ನಿ ಎಂದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿಯವರು ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಉತ್ತಮ ಸಂಘಟನೆ ಮಾಡಿ, ಉತ್ತಮ ಸಂಪರ್ಕವನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಮುಂದಿನ ಜೀವನಕ್ಕೆ ತೆರೆದುಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ, ಪಾಲಿಟೆಕ್ನಿಕ್‌ನ ಕೌಶಲ್ಯಭರಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆತ್ಮವಿಶ್ವಾಸದಿಂದ ಮೇಲೇರುವ ಶಕ್ತಿ ನಿಮ್ಮಲ್ಲಿದೆ. ಉಪನ್ಯಾಸಕರು ತುಂಬಿದ ಶಕ್ತಿಯನ್ನು ತುಂಬಿಕೊಂಡು ಜಾಗ್ರತ ಸಮಾಜದ ನಿರ್ಮಾಣದ ಮುಕುಟಪ್ರಾಯರಾಗಿ ಎಂದು ಹರಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಜಿಯವರಾದ ನರಸಿಂಹ ಪೈ ಹಾಗೂ ಸದಸ್ಯರಾದ ರವಿ ಮುಂಗ್ಲಿಮನೆ ಭಾಗವಹಿಸಿದರು. ಪಾಸ್ತಾವಿಕ ಸ್ವಾಗತವನ್ನು ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ನಡೆಸಿದರು. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ರೋಹಿತ್ ಹೆಚ್.ಪಿ. ಧನ್ಯವಾದ ಸಮರ್ಪಿಸಿದರು. ಇಲೆಕ್ಟ್ರೋನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಜೆ. ಕೆ. ಕಾರ್ಯಕ್ರಮ ನಿರೂಪಿಸಿದರು.