• 08251 231197
  • vptputtur@yahoo.co.in

ಸದ್ವಿಚಾರಧಾರಾ ಸರಣಿಯ ಮೊದಲ ಕಾರ್ಯಕ್ರಮ

ವಿದ್ಯಾರ್ಥಿಗಳು ಎಡರು ತೊಡರುಗಳನ್ನು ಲೆಕ್ಕಿಸದೆ ಏಕಾಗ್ರತೆಯಿಂದ ಶಿಕ್ಷಣ ಪಡೆದು ಸ್ಪಚ್ಛ ಸಂಪನ್ನ ಜೀವನದ ಗುರಿ ತಲುಪಿ- ಕೃಷ್ಣಪ್ರಸಾದ್ ಕಾಯರ್‌ಕಟ್ಟೆ.

ಪುತ್ತೂರು: ರಾಷ್ಟ್ರೀಯತೆಯನ್ನು ಮೈಗೂಡಿಸಿ, ಸ್ವಾವಲಂಬೀ ಹಾಗೂ ಸ್ವಾಭಿಮಾನಿ ವಿದ್ಯಾರ್ಥಿಗಳನ್ನು ರೂಪುಗೊಳಿಸುವ ಹೊಂಗನಸು ಹೊತ್ತು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ನೈತಿಕ, ಬೌದ್ಧಿಕ, ಮತ್ತು ಆಧ್ಯಾತ್ಮಿಕ ಉಪನ್ಯಾಸಗಳ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ಸರಣಿಯ ಮೊದಲ ಕಾರ್ಯಕ್ರಮವು ಇತ್ತೀಚೆಗೆ ಪಾಲಿಟೆಕ್ನಿಕ್‌ನಲ್ಲಿ ಜರಗಿತು.

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಇವರು ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತಾ, ಹಲವು ದೃಷ್ಠಾಂತಗಳೊಂದಿಗೆ ವಿದ್ಯಾರ್ಥಿಗಳ ಜೀವನ ಶೈಲಿ, ನಡವಳಿಕೆಗಳು ಹೇಗಿರಬೇಕೆಂದು ವಿವರಿಸಿದರು. ಅವರು ಮುಂದುವರಿದು ಮಾತನಾಡುತ್ತಾ, ವಿದ್ಯಾರ್ಥಿಗಳು ಕಲಿಕೆಗೆ ಪ್ರವೇಶ ಪಡೆದ ನಂತರ ಕಲಿಕೆಯೊಂದೇ ಗುರಿಯಾಗಿರಬೇಕು. ಬಾಹ್ಯ ಆಕರ್ಷಣೆಗಳಿಗೆ ಎಂದೂ ಬಲಿಯಾಗಬಾರದು. ಏಕಾಗ್ರತೆಯ ಕಲಿಕೆಯೊಂದಿಗೆ ಗುರಿಸಾಧನೆ ಮತ್ತು ಬಾಹ್ಯ ಆಕರ್ಷಣೆಯೊಂದಿಗೆ ವಿನಾಶ ಇದನ್ನು ಅರಿತುಕೊಂಡು ವಿದ್ಯಾರ್ಥಿ ತನ್ನ ಧ್ಯೇಯ ಪಥದತ್ತ ಮುಂದಡಿ ಇಡಬೇಕು ಎಂದರು.ಜೀವನದಲ್ಲಿ ಸ್ವಾರ್ಥಿಯಾಗದೆ, ಪರಧನದ, ಪರರ ಸೊತ್ತಿಗೆ ಆಸೆಪಡದೆ ನಿಸ್ವಾರ್ಥ ಜೀವನ ನಡೆಸಬೇಕೆಂದು ತಿಳಿಸಿದರು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರಂತೆ, ಸಮಾಜಕ್ಕಾಗಿ ಸರ್ವವನ್ನೂ ಮೀಸಲಿಡಬೇಕು. ೧೯೪೩ ರಲ್ಲಿ ಅಂದಿನ ಮೈಸೂರು ಅರಸರ ಕಾಲದಲ್ಲಿ ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ನೀಡುವ ಕನಸಿನೊಂದಿಗೆ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಆರಂಭಿಸುವಲ್ಲಿ ಅಲ್ಲಿನ ಅಂದಿನ ದಿವಾನ ಹಾಗೂ ಸಿವಿಲ್ ಇಂಜಿನಿಯರ್ ಆಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಶ್ರಮ, ತ್ಯಾಗ ಮತ್ತು ಸಾಧನೆಯನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ವಾಹನ ಅಪಘಾತದಲ್ಲಿ ಚಿಕಿತ್ಸೆಪಡೆದಿದ್ದ ಮೂರನೇ ವರ್ಷದ ಅಟೋಮೊಬೈಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ ಪೂರ್ವೀಶ್ ಇವನ ಪೋಷಕರಿಗೆ ಚಿಕಿತ್ಸಾವೆಚ್ಚವಾಗಿ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಉಪನ್ಯಾಸಕ/ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿಗಳು ನೀಡಿರುವ ರೂ. 57000/- ಧನಸಹಾಯವನ್ನು ಎಲ್ಲರ ಸಮ್ಮುಖದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್, ಬಂಗಾರಡ್ಕ ಇವರು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕರಾದ ಸಿ.ಮಹಾದೇವ ಶಾಸ್ತ್ರಿ ಮಣಿಲ,ಇವರು ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಈಶ್ವರಚಂದ್ರ ಡಿ.ಎನ್, ಶ್ರೀಮತಿ ಜಯಂತಿ ನಾಯಕ್, ಪ್ರಾಚಾರ್ಯ ಗೋಪಿನಾಥ್ ಶೆಟ್ಟಿ ಎಂ. ಅಂತಿಮ ವರ್ಷದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ ಸಿದ್ಧಮೂಲೆ ನಿರ್ವಹಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಸ್ವಾಗತಿಸಿ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಮುರಳೀಧರ ಎಸ್ ವಂದಿಸಿದರು.

Highslide for Wordpress Plugin