ಪುತ್ತೂರು: 73 ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಧ್ವಜಾರೋಹಣಗೈದು ಮಾತನಾಡುತ್ತಾ, 1947 ರ ಸ್ವಾತಂತ್ರ್ಯಾನಂತರವೂ ಭಾರತದಲ್ಲಿ ಬ್ರಿಟಿಷ್ ಆಡಳಿತ ಮುಂದುವರಿದಿತ್ತು. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದಂತಹ ಸಂವಿಧಾನ 1950 ಜನವರಿ 26 ರಂದು ಜ್ಯಾರಿಗೆ ಬಂತು. ಅದರಂತೆ ಮುಂದೆ ಪ್ರಜಾತಂತ್ರ ರೀತ್ಯಾ ಕಾನೂನು ದೇಶದಲ್ಲಿ ಜ್ಯಾರಿಗೆ ಬಂತು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲೇ ಸ್ವಾತಂತ್ರ್ಯ ಪಡಕೊಂಡ ಹಲವಾರು ದೇಶಗಳು ಬೇರೆಬೇರೆ ರೀತಿಯ ಸಂವಿಧಾನಗಳನ್ನು ಅಳವಡಿಸಿ ಆಡಳಿತದಲ್ಲಿ ವೈಪಲ್ಯವನ್ನು ಕಂಡುಕೊಂಡರೂ, ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಭಾರತ ವಿಶ್ವದ ಮುಂಚೂಣಿ ತಲುಪಿ, ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಗಳಿಸಿದೆ ಎಂದರು, ಅವರು ಮುಂದುವರಿದು ಮಾತನಾಡುತ್ತಾ ಈ ಭಾಗದ ಎಲ್ಲಾ ಜನಪರ ಯೋಜನೆಗಳಿಗೆ ವಿವೇಕಾನಂದ ಪಾಲಿಟೆಕ್ನಿಕ್ ಪ್ರೇರಣೆ ಹಾಗೂ ನಾಂದಿ ಹಾಡುತ್ತಿದೆ. ಎಲ್ಲಾ ಕಾರ್ಯಯೋಜನೆಗಳು ಪ್ರಥಮವಾಗಿ ಪಾಲಿಟೆಕ್ನಿಕ್ನಲ್ಲಿ ಆರಂಭವಾಗುತ್ತಿವೆ. ಅದಕ್ಕಾಗಿ ಇಲ್ಲಿನ ಪ್ರಾಚಾರ್ಯರು, ಉಪನ್ಯಾಸಕರು, ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿಗಳು ಅಭಿನಂದನೆಗೆ ಅರ್ಹರು ಎಂದು ಹೇಳಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಆಡಳಿತ ಮಂಡಳಿಯ ಸಂಚಾಲಕರಾದ ಸಿ.ಮಹಾದೇವ ಶಾಸ್ತ್ರಿ ಮಣಿಲ, ಕೋಶಾಧಿಕಾರಿ ನರಸಿಂಹ ಪೈ, ಸದಸ್ಯರುಗಳಾದ ರವಿ ಮುಂಗ್ಲಿಮನೆ, ಈಶ್ವರಚಂದ್ರ ಡಿ.ಎನ್. ಪ್ರಾಚಾರ್ಯರಾದ ಗೋಪಿನಾಥ ಶೆಟ್ಟ ಎಂ, ಉಪನ್ಯಾಸಕರು, ಉಪನ್ಯಾಸಕೇತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಜಯಲಕ್ಷ್ಮಿ ಎಸ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ ಸಿದ್ಧಮೂಲೆ ಧ್ವಜ ಆರೋಹಣದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.