ಕೊರೋನಾ ಪಿಡುಗಿನ ಮೊದಲನೇ ಅಲೆ ದೇಶದಾದ್ಯಂತ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜನತೆ ಇದ್ದ ಕೆಲಸಗಳನ್ನು ಕಳೆದು ಕೊಂಡು ಮತ್ತೆ ತಾಯಿನಾಡಿನತ್ತ ಮುಖ ಮಾಡಿರುವ ಸಂದರ್ಭದಲ್ಲಿ ಅಂತಹವರ ಬಾಳಿನಲ್ಲಿ ಆಶಾಕಿರಣವನ್ನು ತುಂಬುವ ದೃಷ್ಠಿಯಿಂದ ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗ್ರಾಮವಿಕಾಸ ಸಮಿತಿ, ಮಂಗಳೂರು ಮತ್ತು ಸಹಕಾರ ಭಾರತಿ, ದಕ್ಷಿಣ ಕನ್ನಡ ಇವುಗಳ ಸಹಕಾರದಿಂದ ಕಾಸರಗೋಡು ಜಿಲ್ಲೆ ಸೇರಿದಂತೆ ದಕ್ಷಿಣ ಕನ್ನಡದ 20 ಪ್ರಮುಖ ಕೇಂದ್ರಗಳಲ್ಲಿ ಸಂಯೋಜಿಸಿದ ಉದ್ಯೋಗ ನೈಪುಣ್ಯ ತರಬೇತಿಯಲ್ಲಿ 4536 ಜನರು 27 ಬೇರೆ ಬೇರೆ ವಿಷಯಗಳಲ್ಲಿ 30 ಗಂಟೆಗಳ ನೈಪುಣ್ಯ ತರಬೇತಿ ಪಡೆದ್ದಿದು, ಅದರ ಫಲಶ್ರುತಿಯಾಗಿ ಈ ತರಬೇತಿಯಿಂದ ಸ್ವಾಲಂಬಿಗಳಾಗಿ ಸ್ವಉದ್ಯೋಗ ಮಾಡುತ್ತಿರುವ ನವ ಉದ್ಯಮಿಗಳ ಉತ್ಪಾದನೆಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಯೋಗ ನೈಪುಣ್ಯ ತರಬೇತಿಯ ಅಂಗವಾಗಿ ವಿವೇಕಾನಂದ ವಿದ್ಯಾಸಂಸ್ಥೆಗಳ ಕೇಶವ ಸಂಕಲ್ಪ ಸಭಾಭವನದಲ್ಲಿ ಏರ್ಪಡಿಸಿರುವ ಸ್ವಾವಲಂಬಿ ಸಮ್ಮಿಲನದ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಎಲ್ಲಾ ಸ್ವಯಂ ಉದ್ಯಮಿಗಳ ಉತ್ಪಾದನೆಗಳ ಪ್ರದರ್ಶನಕ್ಕೆ ಅವಕಾಶ ಇಲ್ಲದೇ ಇರುವುದರಿಂದ, ಆಯ್ದ ೧೫ ಸ್ವಯಂ ಉದ್ಯಮಿಗಳ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಈ ಪ್ರದರ್ಶನದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ನಾ. ಸೀತಾರಾಮ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ಮನೋಭಾವವನ್ನು ಇಟ್ಟುಕೊಂಡು ಪ್ರಾರಂಭಿಸಿದ ಈ ನೈಪುಣ್ಯ ತರಬೇತಿಗೆ ಇಂದು ನಿಜವಾದ ಅರ್ಥ ಬಂದಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರದರ್ಶಿನಿಯಲ್ಲಿ ಇಡಲಾಗಿದ್ದ ಆಯ್ದ ಕೆಲ ಸಾಧಕರ ಮಳಿಗೆಗಳಿಗೆ ಭೇಟಿಕೊಟ್ಟು ಶುಭ ಹಾರೈಸಿದರು.
ಅಪರಾಹ್ನದ ವೇಳೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ., ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್. ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿ, ಸಾಧಕದರನ್ನು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೆ.ಎಂ. ಕೃಷ್ಣ ಭಟ್, ಸತೀಶ್ ರಾವ್, ಅಚ್ಚುತ ನಾಯಕ್, ವಾಮನ ಪೈ, ಶ್ರೀ ಬಲರಾಮ ಆಚಾರ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಗೋಸೇವಾ ಪ್ರಮುಖ್ ಪ್ರವೀಣ ಸರಳಾಯ, ವಿಭಾಗ ಸೇವಾ ಸಹಪ್ರಮುಖ್ ಸುಭಾಶ್ಚಂದ್ರ ಕಳಂಜ, ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್. ಭಟ್, ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ, ಪ್ರಾಚಾರ್ಯ ಗೋಪಿನಾಥ ಶೆಟ್ಟಿ ಇವರು ಉಪಸ್ಥಿತರಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್ನ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕ ಗುರುಪ್ರಸನ್ನ ಜೆ.ಕೆ. ನಿರ್ವಹಿಸಿದ ಈ ಕಾರ್ಯಕ್ರಮದ ಕೊನೆಗೆ ಪಾಲಿಟೆಕ್ನಿಕ್ನ ಕಂಪ್ಯೂಟರ್ ಸೈನ್ಸ್ ವಿಭಾಗಾಧಿಕಾರಿ ರೋಹಿತ್ ಹೆಚ್. ಪಿ. ವಂದಿಸಿದರು.