ಲಸಿಕಾ ಅಭಿಯಾನದ ಮೂಲಕ ಕೋವಿಡ್ ಮುಕ್ತ ಸಮಾಜ ನಿರ್ಮಿಸೋಣ – ಸಂಜೀವ ಮಠಂದೂರು
ಪುತ್ತೂರು: ಈಗಾಗಲೇ ಪುತ್ತೂರು ತಾಲೂಕಿನಲ್ಲಿರುವ ಎಲ್ಲಾ 18+ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಉಳಿದವರಿಗೆ ಶೀಘ್ರವಾಗಿ ಲಸಿಕೆ ವಿತರಣೆ ಆಗಲಿದೆ. ಈ ಅಭಿಯಾನದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ನಗರ ಸಭೆಯವರು ಹಾಗೂ ಇತರ ಇಲಾಖೆಗಳು ಕೈಜೋಡಿಸಿವೆ. ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ಬೇಕಾಗಿರುವ ಕಟ್ಟಡವನ್ನು ಮಂಜೂರಾತಿಗಾಗಿ ಕಳುಹಿಸಿಕೊಡಲಾಗಿದೆ. ಈಗಾಗಲೇ ಮೂಲಭೂತ ಸೌಕರ್ಯವನ್ನು ಸಾಕಷ್ಟು ವೈದ್ಯರನ್ನು ನೇಮಕಮಾಡಿಕೊಳ್ಳುವ ಮೂಲಕ ಒದಗಿಸಿಕೊಡಲಾಗಿದೆ. ಆಮ್ಲಜಕ ಘಟಕದ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದೆ. ನಮ್ಮ ಆರೋಗ್ಯದ ಜೊತೆ ನೆರೆಹೊರೆಯವರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ಧಾರಿ ನಮ್ಮದು. ಲಸಿಕೆಯಿಂದ ಕೋವಿಡ್ ಮುಕ್ತ ಸಮಾಜ ನಿರ್ಮಾಣವಾಗಲಿ. ನಾವೆಲ್ಲರೂ ಸಹಜ ಜೀವನಕ್ಕೆ ಮರಳುವಂತಾಗಲಿ. ಎಲ್ಲಾ ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ಉತ್ತಮ ಭವಿಷ್ಯ ರೂಪಿಸುವಂತಾಗಲಿ ಎಂದು ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀಯುತ ಸಂಜೀವ ಮಠಂದೂರು ಅವರು ವಿವೇಕಾನಂದ ಪಾಲಿಟೆಕ್ನಿಕ್, ನೆಹರು ನಗರ, ಪುತ್ತೂರಿನಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯಗಳ ಜಂಟಿ ಸಹಯೋಗದೊಂದಿಗೆ ನಡೆದ ಬೃಹತ್ ಲಸಿಕಾ ಅಭಿಯಾನದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನುಡಿದರು.
ಲಸಿಕಾ ಅಭಿಯಾನದ ಮೂಲಕ ಮುಂದಿನ ಎರಡು ವಾರಗಳಲ್ಲಿ ಕಡಬ ಹಾಗೂ ಪುತ್ತೂರು ತಾಲೂಕಿನ 18 ವರ್ಷ ದಾಟಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು ಹಾಗೂ ಎರಡನೇ ಡೋಸ್ ಕೂಡ ಸೂಕ್ತ ಸಮಯದಲ್ಲಿ ಇಲ್ಲಿಯೇ ನೀಡಲಾಗುವುದು. ಲಸಿಕೆ ಪಡೆದ ನಂತರವೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗೃತೆವಹಿಸಿ ಎಂದು ಪುತ್ತೂರು ತಾಲೂಕು ವೈದ್ಯಾಧಿಕಾರಿಗಳಾದ ಡಾ| ದೀಪಕ್ ರೈ ಹೇಳಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರಸನ್ನ ಭಟ್ ಇವರು ಮಾತನಾಡುತ್ತಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಲಸಿಕಾ ಅಭಿಯಾನದ ಪ್ರಯೋಜನವನ್ನು ಪಡೆದು ನೀವೆಲ್ಲಾ ಆರೋಗ್ಯವಂತರಾಗಿರಿ ಎಂದು ಹಾರೈಸಿದರು.
ತೃತೀಯ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಆಕಾಶ್ ಕೃಷ್ಣ ಇವರಿಗೆ ವ್ಯಾಕ್ಸಿನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ 500 ಲಸಿಕೆಗಳನ್ನು ನೀಡಲಾಯಿತು. ಪುತ್ತೂರು ನಗರಸಭಾ ಅಧ್ಯಕ್ಷರಾದ ಶ್ರೀ ಜೀವಂಧರ್ ಜೈನ್, ಸದಸ್ಯರಾದ ಜಗನ್ನಿವಾಸ್ ರಾವ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಬಂಗಾರಡ್ಕ ವಿಶ್ವೇಶ್ವರ ಭಟ್, ಪ್ರಾಂಶುಪಾಲೆ ಶ್ರೀಮತಿ ಅಕ್ಷತಾ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೋ. ಎ.ವಿ.ನಾರಾಯಣ್ ಹಾಗೂ ಪ್ರಾಂಶುಪಾಲೆ ಶ್ರೀಮತಿ ಶೋಭಿತಾ ಸತೀಶ್ ಉಪಸ್ಥಿತರಿದ್ದರು.
ಶ್ರೀಮತಿ ಜಯಲಕ್ಷ್ಮಿ ಇವರ ಪ್ರಾರ್ಥನೆಯಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿಜ್ಞಾನ ವಿಭಾಗದ ಮುಖ್ಯಸ್ಥ ಚಂದ್ರಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಮುರಳೀಧರ ಎಸ್. ವಂದಿಸಿದರು.