ಪುತ್ತೂರು: ದಿನಾಂಕ 22-12-20 ರಂದು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹೊಸ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಪ್ರವೇಶ ಪ್ರಕ್ರಿಯೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಅವರು ತಾಂತ್ರಿಕ ಶಿಕ್ಷಣ ಮಂಡಳಿ ಅಳವಡಿಸಿರುವ ಹೊಸ ಶಿಕ್ಷಣ ನೀತಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಎಸ್ ಇವರು ಕಾಲೇಜಿನಲ್ಲಿ ಲಭ್ಯವಿರುವ ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ, ಎನ್‌ಎಸ್‌ಎಸ್, ಹಾಗೂ ಯೋಗ ಇವುಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಇದರ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗ ಮುಖ್ಯಸ್ಥರಾದ ಮುರಳೀಧರ ಎಸ್. ಇವರು ಹೊಸ ಪಠ್ಯಕ್ರಮದಲ್ಲಿ ಪರೀಕ್ಷಾ ರೀತಿ ಹಾಗೂ ಅಂಕಗಳ ಹಂಚಿಕೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಹೊಸ ಪಠ್ಯಕ್ರಮವನ್ನು ಅಭ್ಯಸಿಸುತ್ತಾ ತಮ್ಮನ್ನು ತಾವು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕಾಲೇಜಿನ ಉದ್ಯೋಗ ಮಾಹಿತಿ ಹಾಗೂ ತರಬೇತಿ ವಿಭಾಗದ ಅಧಿಕಾರಿಗಳಾದ ಶ್ರೀಮತಿ ಉಷಾಕಿರಣ ತಿಳಿಸಿದರು. ಪಾಲಿಟೆಕ್ನಿಕ್‌ನ ರೆಡ್‌ಕ್ರಾಸ್‌ನ ಸಂಯೋಜಕರಾದ ಗುರುಪ್ರಸನ್ನ ಇವರು ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್‌ನ ಪ್ರಯೋಜನ ಹಾಗೂ ಅವಶ್ಯಕತೆಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.