ಪರಿವರ್ತನಾ ಯುಗ ಆರಂಭವಾಗಿದೆ – ನಳೀನ್ ಕುಮಾರ್ ಕಟೀಲ್
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಆಶ್ರಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಇವುಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ನಡೆದ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡಿತು. ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಸುಳ್ಯದ ಎ.ಪಿ.ಎಂ.ಸಿ. ಸಭಾಭವನ, ಕಲ್ಲಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಏಕಕಾಲದಲ್ಲಿ ನಡೆದ ಈ ತರಬೇತಿ ಶಿಬಿರದಲ್ಲಿ 833 ಮಂದಿ ತರಬೇತಿಯನ್ನು ಪಡೆದಿರುತ್ತಾರೆ.
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಹಾಗೂ ಮಂಗಳೂರಿನ ಸಂಸದರಾದ ನಳೀನ್ ಕುಮಾರ್ ಕಟೀಲು ಇವರು ಕರೋನದ ನಂತರ ಬದುಕಿನಲ್ಲಿ ಕತ್ತಲೆ ಆವರಿಸಿದೆ. ಕತ್ತಲಿನಲ್ಲಿ ಪ್ರಖರವಾದ ಬೆಳಕನ್ನು ನೀಡುವ ಕೆಲಸ ಈ ಸಂಸ್ಥೆ ಮಾಡಿದೆ. ಸವಾಲಿನ ಮಧ್ಯೆ ಸಾಧನೆಯನ್ನು ತೋರಿಸಬೇಕು. ಯುವ ಸಮುದಾಯಕ್ಕೆ ನೇತೃತ್ವ ಕೊಟ್ಟು ಭಾರತವನ್ನು ಎತ್ತರಕ್ಕೆ ಏರಿಸಬೇಕು. ಸ್ವದೇಶಿ ಚಿಂತನೆಯ ಮೂಲಕ ಉದ್ಯಮಶೀಲತೆಯನ್ನು ಬೆಳೆಸಬೇಕು. ಕೌಶಲ್ಯಭಿವೃದ್ಧಿ ಯೋಜನೆಗಳ ಪರಿಕಲ್ಪನೆಯೊಂದಿಗೆ ಗ್ರಾಮದ ಆರ್ಥಿಕ ಉದ್ದೀಪನೆಯಾಗಬೇಕು. ಚಿಂತೆಯ ಬದಲು ಚಿಂತನೆಂiiನ್ನು ಮಾಡಿದ್ದಿರಿ, ಈ ತರಬೇತಿಗೆ ಬಂದ ನಿಮ್ಮ ಬದುಕು ಉಜ್ವಲವಾಗಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ ಎಂದರು.
ಸಹಕಾರ ಭಾರತಿ ತಾಲೂಕು ಅಧ್ಯಕ್ಷರಾದ ಕೃಷ್ಣ ಕುಮಾರ್ ರೈ ಇವರು ಮಾತನಾಡುತ್ತಾ, ಸಹಕಾರ ಸಂಘದಿಂದ ಆಗುವ ಎಲ್ಲಾ ಸಹಕಾರ ನೀಡುತ್ತೇವೆ. ಪಡೆದುಕೊಂಡ ತರಬೇತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಹೊಸದಿಗಂತ ದೈನಿಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅವರು ಕರೋನದಿಂದ ಜೀವನ ಶೈಲಿಯನ್ನೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆಯಾಗುತ್ತಿದೆ. ಇವತ್ತು ಜಗತ್ತು ಬೆಳೆದಿರುವುದೇ ನೈಪುಣ್ಯದಿಂದ. ನಮ್ಮ ಹಾಗೂ ಸಮಾಜದ ಬೆಳವಣಿಗೆಗೆ ಪ್ರಮಾಣಿಕತೆ ಹಾಗೂ ಕಠಿಣ ದುಡಿಮೆ ಅಗತ್ಯ. ಇಚ್ಛಾ ಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಯು ಯಶಸ್ವಿನ ಗುಟ್ಟು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಮಾತನಾಡುತ್ತಾ, ಬದುಕು ಬರ್ಬರವಾದಾಗ ಅದನ್ನು ನಿರ್ಬರ ಮಾಡುವುದು ಹೇಗೆ ಎನ್ನುವುದೇ ಆತ್ಮನಿರ್ಭರ ಕಾರ್ಯ. ಗ್ರಾಮ ಸ್ವರಾಜ್ಯದ ಮುಖಾಂತರ ರಾಮರಾಜ್ಯವನ್ನು ಕಾಣಬೇಕು. ಸ್ವಾವಲಂಬಿ ಸ್ವಾಭಿಮಾನಿ ಬದುಕಿನತ್ತ ನಾವು ಹೋಗಬೇಕಾದರೆ ನೈಪುಣ್ಯದ ಜೊತೆ ದೇಶವನ್ನು ಬೆಳೆಸುವಂತಹ ಕಾರ್ಯ ನಾವು ಮಾಡಬೇಕು. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಹೇಳಿದರು.
ಅತಿಥಿಗಳು ಹೈನುಗಾರಿಕೆ, ಫ್ಯಾಭ್ರಿಕೇಶನ್, ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ಸಿಸಿಟೀವಿ ಅಳವಡಿಕೆ ಎಂಬ ವಿಷಯಗಳ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಜಯಂತಿ ನಾಯಕ್, ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಕೋಶಾಧಿಕಾರಿ ಹರಿಶ್ಚಂದ್ರ ರೈ ಮುಗೆರೋಡಿ, ಸದಸ್ಯರಾದ ಮೋಹನ್ ಕುಮಾರ್, ಭಾರತೀಯ ಜನತಾ ಪಕ್ಷದ ಮುಖಂಡರುಗಳಾದ ಸಾಜ ರಾಧಾಕೃಷ್ಣ ಆಳ್ವ, ಜಗನ್ನೀವಾಸ ರಾವ್, ಆರ್.ಸಿ. ನಾರಾಯಣ್, ಜಗದೀಶ್ ಸೇನವ ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಶಿಬಿರದ ಸಂಕ್ಷಿಪ್ತ ವರದಿ ನೀಡಿದರು. ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಅದ್ಯಾಪಕಿ ಶ್ರೀಮತಿ ಶ್ವೇತಾ ಮಾತಾಜಿಯವರು ಆತ್ಮನಿರ್ಭರ ಭಾರತದ ಆಶಯ ಗೀತೆ ಹಾಡಿದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರಾರ್ಥಿಗಳ ಅನಿಸಿಕೆ:
ಮನ್ಮಥ ಜೆ ಶೆಟ್ಟಿ : ಸ್ವ ಉದ್ಯೋಗ ಮಾಡಿ ಸ್ವಂತ ಬದುಕನ್ನು ಸಾಗಿಸಲು ಈ ತರಬೇತಿ ಸಹಕಾರಿ ಬದುಕುವ ಯೋಜನೆಯೊಂದಿಗೆ ದಾರಿ ಸಿಕ್ಕಿದಾಗ ಸಾಮಾನ್ಯ ವ್ಯಕ್ತಿಗೂ ಕೂಡಾ ಆತ್ಮ ನಿರ್ಭರ ಯೋಜನೆ ಸಾಧ್ಯ. ನರೇಂದ್ರ ಮೋದಿ ಅವರೊಂದಿಗೆ ನಾವು ಕೂಡ ಕೈಜೋಡಿಸೋಣ
ರಾಜಶೇಖರ : ದನಗಳನ್ನು ನಾವು ಸಾಕುವುದಲ್ಲ. ದನಗಳು ನಮ್ಮನ್ನು ಸಾಕುವುದು. ತರಬೇತಿಯು ಧೈರ್ಯ ಹಾಗೂ ಸ್ಥೈರ್ಯ ಕೊಟ್ಟಿದೆ. ಕೆಎಂಎಫ್ ಆಪ್ ತಯಾರಿಸಿ ಪ್ರತಿ ಮಾಹಿತಿ ಸಿಗುವಂತೆ ಮಾಡಿದರೆ ಉತ್ತಮ.
ರಾಘವೇಂದ್ರ ಪ್ರಭು : ಸ್ವಾವಲಂಬಿ ಭಾರತವನ್ನು ಮುಂಚೂಣಿಯಲ್ಲಿ ನಡೆಸಲು ಸಾಧ್ಯವಾಗುವಲ್ಲಿ ಈ ತರಬೇತಿ ಪ್ರಯೋಜನವಾಗಿದೆ. ಸ್ವಾವಲಂಬಿ ಭಾರತಕ್ಕೆ ಒಂದು ಉತ್ತಮ ಚಿಂತನೆ. ಒಳ್ಳೆಯ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಮನೋಹರ ರಾವ್: ಉತ್ತಮ ಸಂಯೋಜನೆ. ನುರಿತ ತಜ್ಞರಿಂದ ತರಬೇತಿ ಸಿಕ್ಕಿದೆ. ಮೋದಿಯವರ ಆಶಯದಂತೆ ಸ್ವಾವಲಂಬಿ ಭಾರತ ಆಗಲಿ.
ಪ್ರವೀಣ ನಾಯ್ಕ: ಉತ್ತಮ ರೀತಿಯ ತರಬೇತಿ. ವ್ಯವಸ್ಥೆಯೂ ಚೆನ್ನಾಗಿದೆ. ಇನ್ನು ಮುಂದೆಯೂ ಇಂತಹ ತರಬೇತಿಗಳು ನಡೆಯಲಿ.
ಸತೀಶ್ ಶೆಟ್ಟಿ: ತರಬೇತಿಯು ತುಂಬಾ ಪ್ರಯೋಜನವಾಗಿದೆ. ಸುಲಭವಾಗಿ ಬ್ಯಾಂಕಿನ ಸಹಾಯ ಹಾಗೂ ವಿದ್ಯುತ್ತಿನ ಸವಲತ್ತು ಸಿಗುವಂತಾಗಲಿ.