• 08251 231197
  • vptputtur@yahoo.co.in

ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ

ಅವಕಾಶಗಳನ್ನು ಉಪಯೋಗಿಸಿಕೊಂಡು ಜೀವನ ಬೆಳಗಿಸಿ – ಯಸ್. ಆರ್. ರಂಗಮೂರ್ತಿ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಆಶ್ರಯದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಮೂರನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ಹೈನುಗಾರಿಕೆ, ಫ್ಯಾಭ್ರಿಕೇಶನ್, ಕೃಷಿ ಯಂತ್ರೋಪಕರಣಗಳ ಬಳಕೆ ಮತ್ತು ಸಿಸಿಟೀವಿ ಅಳವಡಿಕೆ ಎಂಬ ವಿಷಯಗಳ ಬಗ್ಗೆ ಒಂದು ವಾರಗಳ ಉದ್ಯೋಗ ನೈಪುಣ್ಯ ತರಬೇತಿಗಳನ್ನು ನೀಡಲಾಗುತ್ತದೆ.

ಪುತ್ತೂರು ಉಪವಿಭಾಗಾಧಿಕಾರಿ ಡಾ| ಯತೀಶ್ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ತರಬೇತಿ ಪಡೆಯಲು ಬಂದಿರುವ ಎಲ್ಲರೂ ಅಭಿನಂದನಾರ್ಹರು. ಕರೋನ ಹಾಗೂ ಲಾಕ್‌ಡೌನ್‌ನಿಂದಾಗಿ ಜನರಿಗೆ ತುಂಬಾ ತೊಂದರೆಯಾಗಿದೆ, ಇಂತಹ ಸಂದರ್ಭದಲ್ಲಿ ಜನರಿಗೆ ಸ್ವ ಉದ್ಯೋಗ ಮಾಡುವ ಉತ್ಸಾಹ ತುಂಬಿ ಅದಕ್ಕೆ ಪೂರಕವಾದ ಶಿಕ್ಷಣ ನೀಡಿ ಸುತ್ತಮುತ್ತಲು ಇರುವ ಅವಕಾಶಗಳಿಗೆ ಅನುಗುಣವಾಗಿ ಅವರಲ್ಲಿರುವ ನೈಪುಣ್ಯವನ್ನು ಬೆಳೆಸುವಂತಹ ಕಾರ್ಯ ಮಾಡಿರುವುದು ಒಂದು ಉತ್ತಮ ಕಾರ್ಯ ಹಾಗೂ ಪುಣ್ಯದ ಕೆಲಸ. ಹೊಸ ಹೊಸ ತಂತ್ರಾಜ್ಞಾನಗಳ ಜೊತೆ ನೈಪುಣ್ಯವು ಸಮಾಗಮವಾದಗ ಮೌಲ್ಯವರ್ಧನೆಯಾಗುತ್ತದೆ. ಬದಲಾಗುವ ತಂತ್ರಾಜ್ಞಾನಗಳನ್ನು ಗಮನಿಸುತ್ತಾ ನೈಪುಣ್ಯವನ್ನು ಬೆಳೆಸಿಕೊಳ್ಳಿ ಎಂದರು.

ರಾಷ್ಡ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರಕರಾದ ಸುರೇಶ್‌ರವರು ಮಾತನಾಡುತ್ತಾ, ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಸರಳ ಜೀವನ ಮಾಡುತ್ತಾ ನಮ್ಮ ಗ್ರಾಮವನ್ನು ಸ್ವಾಭಿಮಾನಿ ಮಾದರಿ ಗ್ರಾಮವಾಗಿ ಮಾಡಲು ಪ್ರಯತ್ನಿಸುವ. ಪ್ರಜ್ಞಾವಂತ ನಾಗರಿಕರಾದ ನಾವು ಸುಸಂಸ್ಕೃತ ವ್ಯಕ್ತಿಗಳಾಗಿ ಸಮಾಜದಲ್ಲಿ ಬಾಳಬೇಕು. ಅದಕ್ಕೆ ಈ ತರಬೇತಿಯು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.

ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಎರಡು ಯಶಸ್ವಿ ತರಬೇತುಗಳನ್ನು ನೀಡಿದ ಸಾರ್ಥಕ ಭಾವನೆ ನಮ್ಮಲ್ಲಿದೆ. ಗ್ರಾಮಗಳಿಂದ ನಗರಗಳಿಗೆ ವಲಸೆ ಹೋಗುವುದು ನಿಂತು ಗ್ರಾಮಗಳ ಅಭಿವೃದ್ಧಿಯಾಗಬೇಕು ಎನ್ನುವುದು ನಮ್ಮ ಆಶಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್. ಆರ್. ರಂಗಮೂರ್ತಿ ಇವರು ಜಗತ್ತೇ ತಲ್ಲಣಗೊಂಡಿರುವಂತಹ ಈ ಸಮಯದಲ್ಲಿ ಜನರಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸ ಈ ಸಂಸ್ಥೆಗಳು ಮಾಡಿವೆ. ಜಗತ್ತಿನಲ್ಲೆ ನಮ್ಮ ದೇಶವನ್ನು ಶ್ರೇಷ್ಠ ದೇಶವನ್ನಾಗಿ ಮಾಡಲು ನಾವು ತಯಾರಾಗುವ ಅದಕ್ಕಾಗಿ ನಮ್ಮ ವೃತ್ತಿಯನ್ನು ಬೆಳೆಸಲು ವೃತ್ತಿಯ ರೀತಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಈ ತರಬೇತಿಯು ಮಾಡುತ್ತಿದೆ. ಇದೊಂದು ಉತ್ಕೃಷ್ಟವಾದ ತರಬೇತಿ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ| ಕೆ. ಯಂ. ಕೃಷ್ಣ ಭಟ್ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಸದಸ್ಯರಾದ ಸೂರ್ಯನಾಥ ಆಳ್ವ, ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಹಾಗೂ ಸಂಪನ್ಮೂಲ ವ್ಯಕ್ತಿ ಡಾ| ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.

ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕರಾದ ಮಣಿಲ ಮಹಾದೇವ ಶಾಸ್ತ್ರಿಯವರು ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಛೇರಿ ಸಿಬ್ಬಂದಿ ಶ್ರೀಮತಿ ಉಷಾಕುಮಾರಿ ಪ್ರಾರ್ಥಿಸಿದರು. ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಅದ್ಯಾಪಕಿ ಶ್ರೀಮತಿ ಶ್ವೇತಾ ಮಾತಾಜಿಯವರು ಆತ್ಮನಿರ್ಭರ ಭಾರತದ ಆಶಯ ಗೀತೆ ಹಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin