• 08251 231197
  • vptputtur@yahoo.co.in

ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಸಮಾರೋಪ ಸಮಾರಂಭ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಆಶ್ರಯದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ನಡೆಯುವ ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಗೊಂಡಿತು.

ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಮೇಶ್ ಕಲ್ಪುರೆ ಇವರು, ಶಿಬಿರಾರ್ಥಿಗಳಲ್ಲಿ ಆತ್ಮಶ್ಥೈರ್ಯ ಎದ್ದುಕಾಣುತ್ತಿದೆ. ಪಡೆದ ತರಬೇತಿಯಲ್ಲಿ ಪರಿಪೂರ್ಣತೆಯನ್ನು ಪಡೆದು ಸಮಾಜದಲ್ಲಿ ಉತ್ತಮ ಮಟ್ಟಕ್ಕೆ ಏರಿ ಸ್ವಾವಲಂಬಿಗಳಾಗಿ ಬೆಳೆಯಿರಿ. ವೃತ್ತಿಯಲ್ಲಿ ಕೀಳರಿಮೆ ಇರಬಾರದು ಎಂದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ರೈ ಮಾತನಾಡುತ್ತಾ, ಶಿಕ್ಷಣವೇ ಸಂಸ್ಕಾರ. ನಮ್ಮ ಶಿಕ್ಷಣ ಸಂಸ್ಥೆಯ ಮೇಲೆ ತಾವು ಇಟ್ಟಿರುವ ಪ್ರೀತಿ ಹಾಗೂ ನಂಬಿಕೆಗೆ ನಾವು ಆಭಾರಿಗಳು. ಜೀವ ಮತ್ತು ಜೀವನಕ್ಕಾಗಿ ಈ ತರಬೇತಿ. ಸ್ವಾವಲಂಬಿ ಗ್ರಾಮ ಇದರ ಉದ್ದೇಶ. ಇಲ್ಲಿ ಪಡೆದ ತರಬೇತಿಯಿಂದ ನಿಮಗೆ ಹಾಗೂ ಹಾಗೂ ಸಮಾಜಕ್ಕೆ ಉಪಯೋಗವಾಗಲಿ ಎಂದರು.

ಪುತ್ತೂರು ತಾಲೂಕು ಪಂಚಾಯತು ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿಯವರು, ನೈಪುಣ್ಯವಿದ್ದರೆ ಮಾತ್ರ ಬದುಕು ಸಾದ್ಯ. ಇಲ್ಲಿ ಪಡೆದ ಎಲ್ಲಾ ತರಬೇತಿಗಳಿಗೂ ಸರಕಾರದಿಂದ ಸಿಗುವ ಅನೇಕ ಸಾಲ ಸೌಲಭ್ಯಗಳ ಪ್ರಯೋಜನ ಬಳಸಿಕೊಂಡು ಸಮಾಜದಲ್ಲಿ ಗುರುತಿಸಲ್ಪಡುವ ವ್ಯಕ್ತಿಗಳಾಗಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀನಿವಾಸ ಪೈ ಮಾತನಾಡುತ್ತಾ, ಈ ತರಬೇತಿಯಲ್ಲಿ ತಮ್ಮಲ್ಲಿರುವ ನೈಪುಣ್ಯವನ್ನು ಒರೆಗೆ ಹಚ್ಚಿ ಅದನ್ನು ಹೆಚ್ಚಿಸುವ ಪ್ರಯತ್ನ ನಾವು ಮಾಡಿದ್ದೇವೆ. ನಮ್ಮ ಜೀವನದಲ್ಲಿ ಏನು ಸಾಧಿಸಬೇಕು ಎನ್ನುವ ದೃಷ್ಠಿಕೋನವನ್ನು ಪಡೆದುಕೊಂಡು ದೇಶವನ್ನು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.

ಈ ಸಮಾರಂಭದಲ್ಲಿ ಅತಿಥಿಗಳು ನೆಲಹಾಸು ಅಳವಡಿಕೆ, ಗ್ರಾಹಕ ಮಾಹಿತಿ ಸೇವಾ ಕೇಂದ್ರ, ಪ್ಲಂಬಿಂಗ್ ಹಾಗೂ ಎಲೆಕ್ಟ್ರಿಷಿಯನ್, ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ಪ್ಯಾಶನ್ ಡಿಸ್ಯೆನಿಂಗ್ ಎಂಬ ವಿಷಯಗಳ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ಶಿಬಿರಾರ್ಥಿಗಳಿಂದ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವ ಸಮರ್ಪಣೆ ನಡೆಸಲಾಯಿತು.

ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್, ಕೋಶಧಿಕಾರಿ ಹರಿಶ್ಚಂದ್ರ ರೈ ಮುಗೆರೋಡಿ, ಸರಸ್ವತಿ ವಿದ್ಯಾಲಯ ಕಡಬದ ಸಂಚಾಲಕರಾದ ವೆಂಕಟರಮಣ ರಾವ್, ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಶಿಬಿರಾರ್ಥಿಗಳಾದ ಕು.ಗೌರಿ, ಕು. ಸೌಜನ್ಯ, ಶ್ರೀಮತಿ ಪೂರ್ಣಿಮ ಇವರು ಆತ್ಮನಿರ್ಭರ ಭಾರತದ ಆಶಯ ಗೀತೆ ಹಾಡಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಯಸ್ ಇವರು ಧನ್ಯವಾದ ಸಮರ್ಪಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

ಶಿಬಿರಾರ್ಥಿಗಳ ಅನಿಸಿಕೆ

ಪುಷ್ಪಾಲತ : ಸೂಕ್ತವಾದ ಸಮಯದಲ್ಲಿ ಕಲಿಯಲು ಅವಕಾಶ ಸಿಕ್ಕಿದ್ದು ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇನ್ನೂ ಅವಧಿ ವಿಸ್ತರಣೆಗೊಂಡರೆ ಚೆನ್ನಾಗಿತ್ತು. ನಾವು ಪಡೆದ ತರಬೇತಿಯನ್ನು ಖಂಡಿತವಾಗಿಯೂ ಮುಂದುವರೆಸುತ್ತೇವೆ ಎಂದರು.

ಆಶಾ ಶೆಟ್ಟಿ : ಅನುಭವ ಅದ್ಭುತವಾಗಿತ್ತು. ಸರಿಯಾದ ಶಿಕ್ಷಣ ಸಿಕ್ಕಿದೆ. ವ್ಯವಸ್ಥಿತವಾದ ಅಚ್ಚುಕಟ್ಟಾದ ವ್ಯವಸ್ಥೆ, ಯಾವುದೇ ಗೊಂದಲವಿಲ್ಲದೆ ಸಿಕ್ಕಿದ ತರಬೇತಿ ಬೊಗಸೆಯಷ್ಟಿದ್ದರೂ ಅಪರಿಮಿತವಾಗಿ ಬೆಳೆಯಲು ಅವಕಾಶ ಸಿಕ್ಕಿದೆ ಎಂದರು.

ಮನ್ಮಥ ಶೆಟ್ಟಿ : ವಿವೇಕಾನಂದ ಸಂಸ್ಥೆ ಮಾಡಿದ ಕೆಲಸ ಭಿನ್ನವಾಗಿರುತ್ತದೆ ಎನ್ನುವುದಕ್ಕೆ ಈ ತರಬೇತಿ ಒಂದು ಉದಾಹರಣೆ. ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಪ್ರಧಾನಿಯವರ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ಈ ಸಂಸ್ಥೆ ಮಾಡಿದೆ ಎಂದರು.

ಸುಮಂಗಲ: ಏನೂ ಗೊತ್ತಿಲ್ಲದವರಿಗೆ ಧೈರ್‍ಯ ಸಿಕ್ಕಿದೆ. ನಾವೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮಲು ನಮ್ಮನ್ನು ತಯಾರು ಮಾಡಿದೆ. ಕಾರಣಗಳನ್ನು ಮೀರಿ ಬಂದ ನಮಗೆ ನಿಜವಾಗಿಯೂ ಹೆಮ್ಮೆಯಿದೆ. ಅತ್ಯಮೂಲ್ಯವಾದುದನ್ನು ಪಡೆದುಕೊಂಡಿದ್ದೇವೆ ಎಂದರು.

ರಾಜಶೇಖರ್ : ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿಕೊಟ್ಟಿದ್ದಾರೆ. ಸೂಚ್ಯವಾಗಿ ಮತ್ತು ಪರಿಣಾಮಕಾರಿಯಾಗಿ ತರಬೇತಿ ಸಿಕ್ಕಿದೆ ಎಂದರು.

ಯೋಗೀಶ : ಎಲ್ಲಾ ವ್ಯವಸ್ಥೆಗಳಲ್ಲೂ ಶಿಸ್ತು ಇತ್ತು. ಮೋದಿಯವರ ಕನಸು ನನಸು ಮಾಡಲು ವೇದಿಕೆ ಒದಗಿಸಿದೆ ಎಂದರು.

ವಸಂತ ಶೆಟ್ಟಿ : ಉತ್ತಮ ವ್ಯವಸ್ಥೆ, ಉತ್ತಮ ತರಬೇತಿ ಶಿಸ್ತಿನ ಸಂಸ್ಥೆಯ ಅಡಿಯಲ್ಲಿ ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದರು.

Highslide for Wordpress Plugin