• 08251 231197
  • vptputtur@yahoo.co.in

ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ

ಅನುಭವವೇ ಜೀವನದ ಸರ್ವಶ್ರೇಷ್ಠ ಶಿಕ್ಷಕ – ಯಸ್. ಆರ್. ಸತೀಶ್ಚಂದ್ರ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ ಆಶ್ರಯದಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಯಡಿ ಎರಡನೇ ಹಂತದ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ನೆಲಹಾಸು ಅಳವಡಿಕೆ, ಗ್ರಾಹಕ ಮಾಹಿತಿ ಸೇವಾ ಕೇಂದ್ರ, ಪ್ಲಂಬಿಂಗ್ ಹಾಗೂ ಎಲೆಕ್ಟ್ರಿಷಿಯನ್, ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ಫ್ಯಾಶನ್ ಡಿಸ್ಯೆನಿಂಗ್ ಎಂಬ ವಿಷಯಗಳ ಒಂದು ವಾರಗಳ ನೈಪುಣ್ಯ ತರಬೇತಿಗಳನ್ನು ನೀಡಲಾಗುತ್ತದೆ.

ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಯಸ್. ಆರ್. ಸತೀಶ್ಚಂದ್ರ ಮಾತನಾಡಿ, ನಮ್ಮಲ್ಲಿ ನೈಪುಣ್ಯತೆ ಇದ್ದರೆ ಸಮಾಜ ನಮ್ಮನ್ನು ಗುರುತಿಸುತ್ತದೆ ಹಾಗೂ ಗೌರವಿಸುತ್ತದೆ. ಜಗತ್ತಿನ ವೇಗದ ಯುಗದಲ್ಲಿ ನಾವಿದ್ದೇವೆ. ಆದುದರಿಂದ ನೈಪುಣ್ಯದ ಜೊತೆ ವೇಗ ಕೂಡಾ ಸೇರಿಕೊಂಡರೆ ನಾವು ಜೀವನದಲ್ಲಿ ಉನ್ನತಿಯನ್ನು ಹೊಂದಬಹುದು. ಜೀವನದ ನಿರ್ವಹಣೆಗಾಗಿ ವೃತ್ತಿ, ಜೀವನದ ಕುಶಿಗಾಗಿ ಪ್ರವೃತ್ತಿ ಜೊತೆ ನಾವೆಲ್ಲ ದೇಶದ ಸರದಾರರು ಎನ್ನುವ ಮನೋಸ್ಥಿತಿ ನಮ್ಮಲ್ಲಿದ್ದರೆ ನಾವು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬಹುದು. ಜಗತ್ತಿನ ಈ ಅತ್ಯಂತ ಕಷ್ಟದ ಸಮಯದಲ್ಲಿ ಭಗವಂತ ಈ ಶಿಕ್ಷಣ ಸಂಸ್ಥೆಯ ಮೂಲಕ ನನಗೆ ಒಂದು ಒಳ್ಳೆಯ ಅವಕಾಶವನ್ನು ಕೊಟ್ಟಿದ್ದಾನೆ, ಇದರ ಸದುಪಯೋಗ ಪಡೆದುಕೊಳ್ಳಿ. ನಿಮ್ಮ ನೈಪುಣ್ಯದ ಆಧಾರದ ಮೇಲೆ ನಿಮ್ಮ ಜೀವನ ಹಾಗೂ ಈ ಸಮಾಜ ನಿಂತಿದೆ ಎಂದರು.

ಮುಖ್ಯ ಅತಿಥಿಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ವಾಮನ ಪೈ ಮಾತನಾಡುತ್ತಾ, ಪ್ರತಿಯೊಬ್ಬರಲ್ಲೂ ನೈಪುಣ್ಯತೆ ಇದೆ. ಅದನ್ನು ಹೊರ ತರುವ ಪ್ರಯತ್ನವನ್ನು ನಮ್ಮ ಸಂಸ್ಥೆ ಮಾಡುತ್ತಿದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ನೈಪುಣ್ಯವನ್ನು ಪಡೆದು ಇತರರಿಗೂ ಉದ್ಯೋಗ ನೀಡಿ ಜೀವನದಲ್ಲಿ ಉನ್ನತಿಯನ್ನು ಪಡೆಯಿರಿ ಎಂದು ಶುಭ ಹಾರೈಸಿದರು.

ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗದ ಜಿಲ್ಲಾ ಪ್ರಮುಖ್ ಪ್ರವೀಣ್ ಸರಳಾಯ ಇವರು ಎಲ್ಲರೂ ನಮ್ಮವರು ಎನ್ನುವ ಭಾವನೆ ನಮ್ಮಲ್ಲಿದ್ದರೆ ನಾವು ಕತ್ತಲಿನಿಂದ ಬೆಳಕಿನೆಡೆಗೆ ಸಾಗುತ್ತೇ. ಈ ತರಬೇತಿಯನ್ನು ದೇಶದಲ್ಲೇ ಪ್ರಥಮ ಬಾರಿ ನಾವು ಮಾಡಿರುವುದು ನಮಗೆ ಹೆಮ್ಮೆಯ ವಿಚಾರ. ಪವಿತ್ರವಾದ ಈ ಕಾರ್ಯಕ್ಕೆ ಪರಸ್ಪರ ಸಹಕಾರ ಅಗತ್ಯ. ಸಮಾಜ ಉಪಯೋಗಿ ಕಾರ್ಯಕ್ರಮವನ್ನು ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆ ಮಾಡುತ್ತಿದೆ. ಮಹತ್ವಪೂರ್ಣವಾದ ಈ ಕಾರ್ಯಕ್ರಮಕ್ಕೆ ಸಹಭಾಗಿಗಳಾದ ತಮಗೆಲ್ಲರಿಗೂ ಅಭಿನಂದನೆಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಕೊರೋನದಂತಹ ಪಿಡುಗಿನಿಂದ ನಗರದಲ್ಲಿರುವವರು ಇಂದು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಗೆಲ್ಲ ಉದ್ಯೋಗದ ಅಗತ್ಯವಿರುವ ಈ ಸಮಯದಲ್ಲಿ ಪ್ರಧಾನಿಗಳ ಆಶಯವಾದ ಆತ್ಮನಿರ್ಭರ ಭಾರತದ ಘೋಷಣೆ ನಮಗೆ ಈ ತರಬೇತಿ ನಡೆಸಲು ಪೇರಣೆ ನೀಡಿತು. ಪ್ರಧಾನಿಯವರ ಕನಸನ್ನು ನನಸು ಮಾಡಲು ಬಂದ ತಮಗೆಲ್ಲರಿಗೂ ಧನ್ಯವಾದ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಸದಸ್ಯರುಗಳಾದ ಸೂರ್ಯನಾಥ ಆಳ್ವ, ಕೆ.ಟಿ.ಮುರಳಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು. ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕರಾದ ಮಣಿಲ ಮಹಾದೇವ ಶಾಸ್ತ್ರಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಕಛೇರಿ ಸಿಬ್ಬಂದಿ ಶ್ರೀಮತಿ ಉಷಾಕುಮಾರಿ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin