• 08251 231197
  • vptputtur@yahoo.co.in

ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳೋಣ – ಸಂಜೀವ ಮಠಂದೂರು

ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ

ಪುತ್ತೂರು: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಇವುಗಳ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರ ಆತ್ನನಿರ್ಭರ ಭಾರತದ ಪರಿಕಲ್ಪನೆಯಡಿ ನಡೆಯುವ ಉದ್ಯೋಗ ನೈಪುಣ್ಯ ತರಬೇತಿ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಸುಳ್ಯದ ಎ.ಪಿ.ಎಂ.ಸಿ. ಸಭಾಭವನ, ಕಲ್ಲಡ್ಕದ ಶ್ರೀರಾಮ ಭಜನಾ ಮಂದಿರದಲ್ಲಿ ಏಕಕಾಲದಲ್ಲಿ ಉದ್ಘಾಟಿಸಲಾಯಿತು.

ಜನರ ಬದುಕು ಬರ್ಬರವಾಗುವುದನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ನಿರ್ಮಾಣದ ನಿರ್ಧಾರವನ್ನು ಮಾಡಿದ್ದಾರೆ. ಸ್ವಕ್ಷೇತ್ರದಲ್ಲಿ ಸ್ವತಃ ದುಡಿದು ಇತರರಿಗೂ ಕೆಲಸಕೊಟ್ಟು ಸ್ವಾಭಿಮಾನಿಗಳಾಗಿ ಬದುಕೋಣ, ಇದರಿಂದ ನಮ್ಮ ದೇಶ ಜಗದ್ಗುರು ಭಾರತವಾಗುತ್ತದೆ. ಭಾರತವನ್ನು ಸ್ವಾಭಿಮಾನಿ ಭಾರತವಾಗಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ. ಮನಸ್ಸಿದ್ದರೆ ಮಾರ್ಗವಿದೆ, ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತ ಇರುವವರಿಗೆ ನಮ್ಮ ಸಹಕಾರ ಸದಾ ಇದೆ. ನಮ್ಮ ಸುತ್ತಮುತ್ತಲು ಸಿಗುವ ವಸ್ತುಗಳಿಂದ ಯಾವ ರೀತಿ ಉದ್ಯೋಗ ಮಾಡಬಹುದು ಎಂದು ಈ ತರಭೇತಿ ತಿಳಿಸಿಕೊಡುತ್ತದೆ. ಕೇಂದ್ರದ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ರಾಜ್ಯದ ಉದ್ಯೋಗ ಮಿತ್ರ ಇಲಾಖೆಗಳಿಂದ ನಾವು ಯಾವೆಲ್ಲ ಪ್ರಯೋಜನ ಪಡೆಯಬಹುದು ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಇವರು ಈ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ನುಡಿದರು.

ಮುಖ್ಯ ಅತಿಥಿಗಳಾದ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಈ ಸಂಘರ್ಷದ ಸಮಯದಲ್ಲಿ ಪ್ರಧಾನಿಗಳ ಆಶಯವಾದ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಸಹಕಾರ ನೀಡುವ ಈ ಕಾರ್ಯಕ್ರಮದ ಪ್ರಯೋಜನ ಪಡೆದು ನಾವು ಆತ್ಮನಿರ್ಭರ ಭಾರತ ಕಟ್ಟೋಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಪ್ರಭಾಕರ ಭಟ್ ಕಲ್ಲಡ್ಕ ಇವರು, ಈ ತರಬೇತಿ ನಮ್ಮಲ್ಲಿರುವ ನೈಪುಣ್ಯವನ್ನು ಹೆಚ್ಚು ಮಾಡುವಂತಹ ಕಾರ್ಯವನ್ನು ಮಾಡುತ್ತದೆ. ಈ ತರಬೇತಿಯನ್ನು ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ನಾವು ಮಾಡುತ್ತಾ ಇರುವುದು ಹೆಮ್ಮೆಯ ವಿಚಾರ. ಈಗಿನ ವಾತಾವರಣಕ್ಕೆ ಈ ತರಬೇತಿಯ ಅವಶ್ಯಕತೆ ಬಹಳ ಇದೆ. ನಮ್ಮ ಸುತ್ತಮುತ್ತಲು ಸಿಗುವ ವಸ್ತುಗಳಿಂದ ಏನಾದರೂ ಪ್ರಯೋಜನಕಾರಿ ವಸ್ತುವಿನ ತಯಾರಿ ಮಾಡುವುದು ಮಾತ್ರವಲ್ಲ ಅವುಗಳ ಮಾರಾಟ ಮಾಡುವ ಕಲೆ ಕೂಡಾ ಬಹಳ ಅಗತ್ಯ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕರಾದ ಮಹದೇವ ಶಾಸ್ತ್ರಿಯವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಇವರು ಧನ್ಯವಾದ ಸಮರ್ಪಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಸದಸ್ಯರುಗಳಾದ ಸೂರ್ಯನಾಥ ಆಳ್ವ, ಹರಿಶ್ಚಂದ್ರ ಮುಗೆರೋಡಿ, ಶ್ರೀಮತಿ ಮೋಹಿನಿ ದಿವಾಕರ್, ಶ್ರೀಮತಿ ತ್ರಿವೇಣಿ ಪೆರುವೋಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ಉಪಸ್ಥಿತರಿದ್ದರು.

ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಅಧ್ಯಾಪಕಿ ಶ್ರೀಮತಿ ಶ್ವೇತಾ ಮಾತಾಜಿಯವರು ಹಾಡಿದ ಆತ್ಮನಿರ್ಭರ ಭಾರತದ ಆಶಯ ಗೀತೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin