ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ಸಿವಿಲ್ ಡಿಪೆನ್ಸ್ ಪೋರ್ಸ್, ಪುತ್ತೂರು ಘಟಕ ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವಜನರ ಒಂದು ಪೌರ ರಕ್ಷಣಾ ದಳವನ್ನು ರಚಿಸಿ ಅವರಿಗೆ ಪ್ರಥಮ ಚಿಕಿತ್ಸೆ, ಆಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದಿನಕರ ಶೆಟ್ಟಿ, ಉಪ ಪೋಲಿಸ್ ಅಧೀಕ್ಷಕರು, ಪುತ್ತೂರು ಇವರು 2009 ರಲ್ಲಿ ಅತಿವೃಷ್ಠಿ ಸಮಯದಲ್ಲಿ ಮಂತ್ರಾಲಯದ ಸಮೀಪ ತುಂಗಭದ್ರಾ ಮತ್ತು ಅಘನೀ ನದಿ ತೀರದ ಹಳ್ಳಿಯ ಒಂದು ಶಾಲೆಯಲ್ಲಿ ಸಿಲುಕಿಕೊಂಡಿದ್ದ ಶಿಕ್ಷಕಿಯರನ್ನು ಕರೆತರಲು ಬೋಟ್ನಲ್ಲಿ ಹೋಗಿ ಅದರ ತಾಂತ್ರಿಕ ದೋಷದಿಂದ ಹಾಳಾದಾಗ ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸುತ್ತ್ತಾ ಸರಿಯಾದ ತರಬೇತಿ ತುಂಬಾ ಅಗತ್ಯ ಎಂದರು. ಇಂತಹ ಪ್ರ್ರಾಕೃತಿಕ ವಿಪತ್ತುಗಳ ಸಮಯದಲ್ಲಿ ಜನರಿಗೆ ಆಗುವ ತೊಂದರೆಗಳನ್ನು ನಿಭಾಯಿಸಲು ಪೌರ ರಕ್ಷಣಾ ದಳದ ಅಗತ್ಯ ತುಂಬಾ ಇದೆ. ತರಬೇತಿ ಪಡೆದ ಸದಸ್ಯರಿಂದ ಸರಿಯಾದ ರೀತಿಯಲ್ಲಿ ಜನರ ರಕ್ಷಣೆ ಹಾಗೂ ದೇಶದ ರಕ್ಷಣೆ ಮಾಡಲು ಸಾದ್ಯ. ಈ ರೀತಿ ನಮಗೆ ಸಮಾಜ ಸೇವೆ ಮಾಡಲು ಅವಕಾಶ ದೊರಕುತ್ತದೆ. ಈ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿ ಎಂದರು.
ದಕ್ಷಿಣ ಕನ್ನಡದ ಪೌರ ರಕ್ಷಣಾ ದಳದ ಮುಖ್ಯ ಪಾಲಕರಾದ ಶ್ರೀ ಡಾ| ಮುರಳಿ ಮೋಹನ್ ಚೂಂತಾರ್ ಇವರು ಭಾರತದಲ್ಲಿ ಯುವಕರ ಸಂಖ್ಯೆ ಜಾಸ್ತಿ, ದೇಶ ರಕ್ಷಣೆ ಯುವಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಜಾತಿ ಮತ ಬೇದವಿಲ್ಲದೆ ತಾಲೂಕು ಕೇಂದ್ರಗಳಲ್ಲಿ ಯುವಕರ ಒಂದೊಂದು ತಂಡವನ್ನು ರಚಿಸುವ ಕಾರ್ಯ ಮಾಡಲಾಗುತ್ತಿದೆ. ಸ್ವಚ್ಛ, ಸಧೃಢ ಭಾರತವನ್ನು ಕಟ್ಟಲು ಇಂತಹ ಯುವಕರ ಸಹಕಾರ ಅಗತ್ಯ ಈ ನಿಟ್ಟಿನಲ್ಲಿ ಸಹಕರಿಸಿದ ವಿವೇಕಾನಂದ ಪಾಲಿಟೆಕ್ನಿಕ್ಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀಯುತ ಡಾ| ಪ್ರಭಾಕರ ಭಟ್, ಕಲ್ಲಡ್ಕ ಇವರು ಪೌರ ರಕ್ಷಣಾ ದಳ, ಸಮಾಜವನ್ನು ಹಾಗೂ ದೇಶವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಭಾರತ ಸಶಕ್ತವಾಗಿದೆ. ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದು ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಪ್ರಸನ್ನ ಭಟ್, ಸದಸ್ಯರಾದ ಸೂರ್ಯನಾಥ ಆಳ್ವ, ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ, ಇಂಡಿಯನ್ ರೆಡ್ ಕ್ರಾಸ್ ಬೆಂಗಳೂರು ಹಾಗೂ ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಸನ್ ನ್ಯೂ ಡೆಲ್ಲಿ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್, ನ್ಯಾಯವಾದಿ ಮತ್ತು ದಕ್ಷಿಣ ಕನ್ನಡದ ಪೌರ ರಕ್ಷಣಾ ದಳದ ಸ್ವಯಂಸೇವಾ ಸದಸ್ಯರಾದ ಶ್ರೀ ಸಂತೋಷ ಪೀಟರ್ ಡಿಸೋಜ, ದಕ್ಷಿಣ ಕನ್ನಡದ ಪೌರ ರಕ್ಷಣಾ ದಳದ ಸದಸ್ಯರಾದ ಶ್ರೀ ನಿತಿನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿಯವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪುತ್ತೂರು ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಆಸ್ಕರ್ ಆನಂದ್ ವಂದಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಉಷಾಕಿರಣ್ ಕಾರ್ಯಕ್ರಮ ನಿರ್ವಹಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಕಾರ್ಯಕ್ರಮ ಸಂಯೋಜಿಸಿದ್ದರು.
ಸಭಾ ಕಾರ್ಯಕ್ರಮ ನಂತರ ಶಿಬಿರಾರ್ಥಿಗಳಿಗೆ ಡಾ| ರಾಮಚಂದ್ರ ಭಟ್ ಅವರು ಪ್ರಥಮ ಚಿಕಿತ್ಸೆ, ಶ್ರೀ ಸಂತೋಷ ಪೀಟರ್ ಡಿಸೋಜ ಅವರು ಅಗ್ನಿ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ಶ್ರೀ ನಿತಿನ್ ಸುವರ್ಣರವರು ಪ್ರಾಯೋಗಿಕ ತರಬೇತಿಯನ್ನು ನೀಡಿದರು.