ಸದೃಡ ಸಮಾಜಕ್ಕಾಗಿ ಆರೋಗ್ಯವಂತ ಜೀವನ – ಡಾ| ರಾಮಚಂದ್ರ ಭಟ್
ಪುತ್ತೂರು: ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಆಯ್ದ ಸ್ವಯಂಸೇವಕರಿಗೆ ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ಎಂಬ ವಿಷಯದಲ್ಲಿ ತರಬೇತಿ ಶಿಬಿರವು ವಿವೇಕಾನಂದ ಪಾಲಿಟೆಕ್ನಿಕ್ನ ಎ.ವಿ.ಹಾಲ್ನಲ್ಲಿ ನಡೆಯಿತು. ಈ ಕಾರ್ಯಕ್ರವವನ್ನು ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಷನ್ ನ್ಯೂ ಡೆಲ್ಲಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್ ನೆರವೇರಿಸಿ ಕೊಟ್ಟರು.
ಇವರು ಮಾತನಾಡುತ್ತಾ ಸದೃಡ ಸಮಾಜವನ್ನು ನಿರ್ಮಾಣ ಮಾಡುವಂತಹ ಕಾಳಜಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕು, ಇದಕ್ಕಾಗಿ ನಮ್ಮ ಆರೋಗ್ಯ ಚೆನ್ನಾಗಿರಬೇಕು, ಆರೋಗ್ಯವಂತ ಜೀವನ ನಮ್ಮದಾದಾಗ ಸದೃಡ ಸಮಾಜವನ್ನು ಕಟ್ಟಲು ಸಾದ್ಯ ಎಂದರು. ಈ ಶಿಬಿರವು ಪ್ರಥಮ ಚಿಕಿತ್ಸೆಯ ಪ್ರಾಯೋಗಿಕ ವಿಧಾನಗಳ ಬಗ್ಗೆ ಯುವ ರೆಡ್ಕ್ರಾಸ್ನ ಸ್ವಯಂಸೇವಕರಿಗೆ ತಿಳುವಳಿಕೆ ನೀಡಲು ಆಯೋಜಿಸಲ್ಪಟ್ಟಿತ್ತು. ಮುಖ್ಯವಾಗಿ ರಸ್ತೆ ಅಪಘಾತ ಸಂಭವಿಸಿದಾಗ ನಾವು ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಯ ವಿಧಾನಗಳು, ಅಪಘಾತಕ್ಕೆ ಒಳಗಾದ ವ್ಯಕ್ತಿಯಲ್ಲಿ ಗಾಯಗಳಾಗಿದ್ದರೆ, ಆ ಗಾಯಗಳನ್ನು ಯಾವೆಲ್ಲಾ ರೀತಿಯಲ್ಲಿ ವಿಂಗಡಿಸಿ ಅವನಿಗೆ ಸೂಕ್ತವಾದ ಪ್ರಥಮ ಚಿಕಿತ್ಸೆ ನೀಡಬಹುದು, ಅಂತೆಯೇ ಗಾಯಾಳುವಿನ ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವವಾದಾಗ ಅಥವಾ ಮೂಳೆಗಳು ಮುರಿತಕ್ಕೊಳಗಾದಾಗ ಆ ವ್ಯಕ್ತಿಗೆ ನೀಡಬೇಕಾದ ಚಿಕಿತ್ಸೆಯನ್ನು ಪ್ರಾಯೋಗಿಕ ಅಣಕು ಪ್ರದರ್ಶನದ ಮೂಲಕ ವಿವರಿಸಿದರು.
ಯಾವುದೇ ಒಬ್ಬ ವ್ಯಕ್ತಿಯಲ್ಲಿ ಹೃದಯ ಸಂಬಂಧಿ ತೊಂದರೆ ಉಂಟಾದಾಗ ಹಾಗೂ ಹೃದಯಾಘಾತಕ್ಕೆ ಒಳಗಾದಾಗ ಹಾಗೂ ಒಬ್ಬ ವ್ಯಕ್ತಿಯು ನೀರಿನಲ್ಲಿ ಮುಳುಗಿದಂತಹ ಸಂದರ್ಭಗಳಲ್ಲಿ ವ್ಯಕ್ತಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ಏನು ಎಂಬುದನ್ನು ವಿವರಿಸಿದರು. ಆತ್ಮಹತ್ಯೆಯ ಪ್ರಕರಣಗಳಲ್ಲಿ ಯುವ ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರು ಅನುಸರಿಸಬೇಕಾದ ವಿಧಾನ ಮುಖ್ಯವಾಗಿ ವಿಷ ಪದಾರ್ಥಗಳ ಸೇವನೆ ಮಾಡಿದಂತಹ ಸಂದರ್ಭ, ಆ ವಿಷವನ್ನು ದೇಹದಿಂದ ಹೇಗೆ ಹೊರತೆಗೆಯಬಹುದೆಂದು ವಿವರಿಸಿದರು.
ಈ ಶಿಬಿರದಲ್ಲಿ ಭಾಗಿಯಾದ ಯುವ ರೆಡ್ ಕ್ರಾಸ್ನ ಸ್ವಯಂಸೇವಕರಿಗೆ ಪ್ರಮಾಣ ಪತ್ರವನ್ನು ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರಥಮ ಚಿಕಿತ್ಸೆಯ ಮಾಹಿತಿ ನಮ್ಮಲ್ಲಿ ಇದ್ದರೆ, ಯಾವುದೇ ಸಂದರ್ಭದಲ್ಲಿ ನಾವು ಧೃತಿಗೆಡದೆ ಎಂತಹಾ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿ ನಮ್ಮದಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ಕ್ರಾಸ್ ಪುತ್ತೂರು ಘಟಕದ ಅಧ್ಯಕ್ಷರಾದ ರೊಟೇರಿಯನ್ ಓಸ್ಕರ್ ಆನಂದ್, ರೊಟೇರಿಯನ್ ವಿಕ್ಟರ್, ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಜೆ.ಕೆ. ನೆರವೇರಿಸಿದರು.