21ನೇ ಶತಮಾನ ಭಾರತೀಯರ ಶತಮಾನ – ಎಸ್ ಆರ್ ರಂಗಮೂರ್ತಿ
ಪುತ್ತೂರು: ವಿದ್ಯಾರ್ಥಿ ಸಂಘ ಮತ್ತು ಯುವ ರೆಡ್ಕ್ರಾಸ್ ಘಟಕವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್ ಆರ್ ರಂಗಮೂರ್ತಿ ಇವರು ಎಲ್ಲರೂ ನಾಯಕರಾಗಲು ಸಾದ್ಯವಿಲ್ಲ, ಆದರೆ ಭಗವಂತ ನಮಗೊಂದು ಜವಾಬ್ದಾರಿ ಕೊಟ್ಟಿರುತ್ತಾನೆ, ಅದು ಏನು ಎಂಬುದನ್ನು ತಿಳಿದುಕೊಂಡು ನಾವು ಪ್ರಮಾಣಿಕವಾಗಿ ಜೀವನ ನಡೆಸಬೇಕು. 21ನೇ ಶತಮಾನ ಭಾರತೀಯರ ಶತಮಾನ ಈಗ ಜಗತ್ತೇ ಭಾರತಕ್ಕೆ ಗೌರವ ಕೊಡುತ್ತಿದೆ. ಇಂತಹ ನಾಯಕತ್ವ ನಮಗೆ ಬೇಕಾಗಿದೆ, ಇಂತಹ ಆದರ್ಶವನ್ನು ಇಟ್ಟುಕೊಂಡು ಉತ್ತಮ ವಿದ್ಯಾರ್ಥಿ ನಾಯಕರಾಗಿ ಕರ್ನಾಟಕದಲ್ಲಿಯೇ ಉತ್ತಮ ಪಾಲಿಟೆಕ್ನಿಕ್ ಎಂಬ ಹೆಸರನ್ನು ಗಳಿಸಿದ ಈ ಕಾಲೇಜಿನ ಏಳಿಗೆಗೆ ಶ್ರಮಿಸಿ ಎಂದು ವಿದ್ಯಾರ್ಥಿ ನಾಯಕರಿಗೆ ಹಿತವಚನ ನೀಡಿ, ರೆಡ್ಕ್ರಾಸ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರೆಡ್ಕ್ರಾಸ್ ನಮ್ಮೆಲ್ಲರ ಜೀವನದ ಭಾಗವಾಗಲಿ ಎಂದು ಹಾರೈಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕರಾದ ವಾಮನ ಪೈ ರೆಡ್ಕ್ರಾಸ್ ಸಂಸ್ಥೆಯ ಪ್ರಯೋಜನಗಳ ಬಗ್ಗೆ ವಿವರಿಸಿ ಪಾಲಿಟೆಕ್ನಿಕ್ನ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಲಹೆ ನೀಡಿದರು. ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕರಾದ ಮಹದೇವ ಶಾಸ್ತ್ರಿಯವರು ವಿದ್ಯಾರ್ಥಿಗಳಿಗೆ ತಪಸ್ಸಿನಂತೆ ಅಧಯನ ಮಾಡಿ, ನಿಮ್ಮ ಸುತ್ತಮುತ್ತಲಿರುವ ಆದರ್ಶ ವ್ಯಕ್ತಿಗಳನ್ನು ಗಮನಿಸಿ ಅವರಂತೆ ನಿಮ್ಮ ಜೀವನ ಸಾಗಿಸಿ, ನಿಮಗೆ ಕಾಲೇಜಿನ ವತಿಯಿಂದ ಪೂರ್ಣ ಸಹಕಾರವನ್ನು ನೀಡಲಾಗುವುದು ಎಂದರು.
ಸೈಂಟ್ ಜಾನ್ ಅಂಬ್ಯುಲೆನ್ಸ್ ಮತ್ತು ರೆಡ್ಕ್ರಾಸ್ನ ಹಿರಿಯ ತರಬೇತುದಾರರಾದ ರಾಮಚಂದ್ರ ಭಟ್ ರೆಡ್ಕ್ರಾಸ್ ಸಂಸ್ಥೆಯ ಸ್ಥಾಪನೆ, ಕಾರ್ಯವೈಖರಿ, ಉದ್ದೇಶ, ತತ್ವಗಳು ಹಾಗೂ ಚಟುವಟಿಕೆಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ದುರಾಭ್ಯಾಸಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪುತ್ತೂರು ರೆಡ್ಕ್ರಾಸ್ನ ಅಧ್ಯಕ್ಷರಾದ ಓಸ್ಕರ್ ಆನಂದ್ ಅವರು ಮಾನವೀಯತೆಯ ಸೇವೆ ನೀಡುವುದೇ ರೆಡ್ಕ್ರಾಸ್ನ ಉದ್ದೇಶ, ಪ್ರಥಮ ಚಿಕಿತ್ಸೆಯ ಅಗತ್ಯ ಹಾಗೂ ಇದರಿಂದ ಜೀವಗಳ ರಕ್ಷಣೆ ಹೇಗೆ ಮಾಡಬಹುದು ಎಂದು ಉದಾಹರಣೆ ಮೂಲಕ ತಿಳಿಸಿದರು.
ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ವಿದ್ಯಾರ್ಥಿ ಪ್ರತಿನಿಧಿಗಳನ್ನು ಅಭಿನಂದಿಸುತ್ತಾ ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿ ಸಾಮರ್ಥ್ಯವಿರುತ್ತದೆ ಆದರೆ ಅವರಿಗೆ ಅದರ ಅರಿವಿರುವುದಿಲ್ಲ, ಸೂಕ್ತ ಮಾರ್ಗದರ್ಶನದ ಮೂಲಕ ಅರಿವು ಮೂಡಿಸುವುದೇ ಶಿಕ್ಷಣ ಎಂದರು. ಈ ಸಂದರ್ಭದಲ್ಲಿ ತ್ರಿಚಿ ಕೊಂಗನಾಡು ಪಾಲಿಟೆಕ್ನಿಕ್ನಲ್ಲಿ ನಡೆದ ಅಖಿಲ ಭಾರತ ದಕ್ಷಿಣ ಪ್ರಾಂತದ ಅಂತರ ಪಾಲಿಟೆಕ್ನಿಕ್ ಮಟ್ಟದ ಕ್ರೀಡಾಕೂಟದಲ್ಲಿ 4×100 ಮೀ ರಿಲೇಯಲ್ಲಿ ಬೆಳ್ಳಿ ಪದಕ ಪಡೆದ ತೃತೀಯ ವರ್ಷದ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿ ಮಹೇಂದ್ರ ಶಂಕರ್ ಬಿಲ್ಲವ ಹಾಗೂ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಲೋಹಿತ್ ಇವರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಇವರು ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಚಂದ್ರಕುಮಾರ್ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ತೃತೀಯ ವರ್ಷದ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿನಿ ಕುಮಾರಿ ಸಹನಾ ಜೆ ಭಂಡಾರಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕ್ಷೇಮಪಾಲನಾಧಿಕಾರಿ ಪುಷ್ಪಾ ಬಿ ಎನ್ ವಂದಿಸಿದರು. ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಹಿರಿಯ ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರ್ವಹಿಸಿದರು.