ಪ್ರಥಮ ಚಿಕಿತ್ಸೆ ಮೂಲಕ ಮನುಷ್ಯ ಮನುಷ್ಯನಿಗೆ ನೆರವಾಗಲಿ – ಡಾ| ರಾಮಚಂದ್ರ ಭಟ್
ಪುತ್ತೂರು: ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಎಂಬ ವಿಷಯಕ್ಕೆ ಸಂಬಂದಿಸಿದ ಒಂದು ದಿನದ ತರಬೇತಿ ಕಾರ್ಯಾಗಾರವು ವಿವೇಕಾನಂದ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರವವನ್ನು ಇಂಡಿಯನ್ ರೆಡ್ ಕ್ರಾಸ್ ಬೆಂಗಳೂರು ಹಾಗೂ ಸೈಂಟ್ ಜಾನ್ ಅಂಬ್ಯುಲೆನ್ಸ್ ಅಸೋಸಿಯೆಸನ್ ನ್ಯೂ ಡೆಲ್ಲಿ ಇದರ ಹಿರಿಯ ತರಬೇತುದಾರರಾದ ಡಾ| ರಾಮಚಂದ್ರ ಭಟ್ ನಡೆಸಿಕೊಟ್ಟರು. ಪ್ರಥಮ ಚಿಕಿತ್ಸೆಯ ಮಹತ್ವವನ್ನು ತಿಳಿಸುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತಹ ದೃಷ್ಟಿಯಿಂದ ವಿವಿದ ಪೌಷ್ಟಿಕಾಂಶಗಳ ಇರುವಿಕೆಯನ್ನು ಮತ್ತು ಪೌಷ್ಟಿಕಾಂಶಗಳನ್ನು ದೇಹಕ್ಕೆ ಪೂರೈಸುವ ಆಹಾರ ಪದ್ದತಿಗಳ ಬಗ್ಗೆ ವಿವರಿಸಿದರು. ದೇಹದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣ ಎಷ್ಟಿರಬೇಕು ಅಂತೆಯೇ ನಮ್ಮ ದೇಹದಲ್ಲಿ ಮತ್ತು ನಮ್ಮ ಆಹಾರ ಪದ್ಧತಿಯಲ್ಲಿ ಕಬ್ಬಿಣದ ಅಂಶವಿರುವ ಪದಾರ್ಥಗಳು ಯಾವುವು, ದೇಹಕ್ಕೆ ದಿನಂಪ್ರತಿ ಪೂರೈಕೆಯಾಗಬೇಕಾದ ನೀರಿನ ಪ್ರಮಾಣ ಎಷ್ಟಿರಬೇಕು ಎಂಬುದನ್ನು ಅವರು ವಿವರಿಸಿದರು.
ನಮ್ಮ ದೇಹದ ಯಾವುದೇ ಭಾಗಗಳಲ್ಲಿ ಗಾಯಗಳಿಂದಾಗಿ ರಕ್ತಸ್ರಾವವಾದಾಗ, ದೇಹದ ಮೂಳೆಗಳು ಮುರಿತಕ್ಕೊಳಗಾದಾಗ, ಸುಟ್ಟಗಾಯಗಳಾದಾಗ, ದೇಹಕ್ಕೆ ವಿಷ ಸೇರಿಕೊಂಡಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆಯ ವಿಧಾನದ ಬಗ್ಗೆ ಪ್ರಯೋಗಿಕವಾಗಿ ಯುವ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಮೂಲಕ ಮನುಷ್ಯ ಮನುಷ್ಯನಿಗೆ ನೆರವಾಗಬೇಕು, ಜೀವರಕ್ಷಣೆ ನಮ್ಮೆಲ್ಲರ ಹೊಣೆ, ಒಂದು ಜೀವವನ್ನು ಉಳಿಸುವ ಕರ್ತವ್ಯ ನಮಗಿದೆ, ಜೀವವನ್ನು ತೆಗೆಯುವ ಹಕ್ಕು ನಮಗಿಲ್ಲ ಎಂದರು. ಇದಲ್ಲದೆ ರಸ್ತೆ ಅಪಘಾತದ ಸಂದರ್ಭದಲ್ಲಿ ನಾವು ಮೂಲಭೂತವಾಗಿ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಅಂತೆಯೇ ವ್ಯಕ್ತಿಗೆ ಹೃದಯ ಸ್ತಂಭನ ಉಂಟಾದಾಗ ಆ ವ್ಯಕ್ತಿಗೆ ನೀಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ವಿವರಿಸಿದರು. ಈ ಕಾರ್ಯಾಗಾರವು ಯುವ ರೆಡ್ ಕ್ರಾಸ್ ಘಟಕದ ಎಲ್ಲಾ ಸ್ವಯಂಸೇವಕರಿಗೆ ನಡೆಸಲ್ಪಟ್ಟಿತ್ತು. ಕಾರ್ಯಾಗಾರವನ್ನು ಎರಡು ಅವಧಿಗಳಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್, ಸಂಚಾಲಕರಾದ ಮಹಾದೇವ ಶಾಸ್ತ್ರಿ, ಸದಸ್ಯರಾದ ಮೋಹನ್ ಕೆ.ಎಸ್., ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ, ಪುತ್ತೂರು ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಓಸ್ಕರ್ ಆನಂದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾ| ರಾಮಚಂದ್ರ ಭಟ್ ಇವರ ಪರಿಚಯವನ್ನು ವಿವೇಕಾನಂದ ಪಾಲಿಟೆಕ್ನಿಕ್‌ನ ಯುವ ರೆಡ್‌ಕ್ರಾಸ್ ಘಟಕದ ಜೊತೆಕಾರ್ಯಕರ್ಶಿ ದಿಶಾ ನೆರವೇರಿಸಿದರು. ಯುವ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಶ್ರವಣ್ ಎ ಎಸ್ ವಂದಿಸಿದರು. ಯುವ ರೆಡ್‌ಕ್ರಾಸ್ ಘಟಕದ ಉಪಾಧ್ಯಕ್ಷರಾದ ಕವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಹಿರಿಯ ಉಪನ್ಯಾಸಕರಾದ ಪ್ರಮೋದ್ ಎಂ ಎಸ್ ಕಾರ್ಯಕ್ರಮ ಸಂಯೋಜಿಸಿದ್ದರು.