ಸಾರಿಗೆ ನಿಯಮಗಳು ಇರುವುದು ನಮ್ಮ ಸುರಕ್ಷತೆಗಾಗಿ – ಪ್ರಸನ್ನ ಎನ್ ಭಟ್
ಪುತ್ತೂರು: ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಆಶ್ರಯದಲ್ಲಿ ವಾಹನ ಚಾಲಕರ ತರಬೇತಿ ಕಾರ್ಯಾಗಾರ ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಭಟ್ ಮಾತನಾಡಿ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ಸಹಕರಿಸಿದ ಶ್ರೀಕೃಷ್ಣನಂತೆ ಈ ಸಂಸ್ಥೆಯ ಸಾರಥಿಗಳು ನಮ್ಮೆಲ್ಲ ಚಾಲಕರು. ಚಾಲಕರ ಕೆಲಸ ತುಂಬಾ ಜವಾಬ್ದಾರಿಯುತವಾದದ್ದು. ಸಾರಿಗೆ ನಿಯಮಗಳು ಇರುವುದು ನಮ್ಮ ಸುರಕ್ಷತೆಗಾಗಿ. ಅದನ್ನು ನಾವು ಮೀರಬಾರದು, ಪಾಲಿಸಲೇಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಲಿಟೆಕ್ನಿಕ್ನ ಪ್ರಾಚಾರ್ಯರಾದ ಗೋಪಿನಾಥ್ ಶೆಟ್ಟಿ ಎಂ ಮಾತಾನಾಡುತ್ತಾ, ಮನುಷ್ಯ ಮನುಷ್ಯರನ್ನು ಗೌರವಿಸಬೇಕು, ಇದರಿಂದ ಜೀವನ ಮೌಲ್ಯವನ್ನು ವೃದ್ಧಿಸಲು ಸಾದ್ಯ. ಚಾಲಕರಿಗೆ ತಾಳ್ಮೆ ತುಂಬಾ ಅಗತ್ಯ. ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇತರರಿಗೆ ತೊಂದರೆಯಾಗದಂತೆ ವಾಹನವನ್ನು ಚಲಾಯಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮವು ಎರಡು ಅವಧಿಗಳೊಂದಿಗೆ ನೆರವೇರಿತು. ಮೊದಲನೇ ಅವಧಿಯನ್ನು ಪುತ್ತೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಎ, ಇವರು ಸಂಪನ್ಮೂಲ ವ್ಯಕ್ತಿಯಾಗಿ ನಡೆಸಿಕೊಟ್ಟರು. ಇವರು ತಮ್ಮ ಅವಧಿಯಲ್ಲಿ ವಾಹನ ಚಾಲಕರು ಪಾಲಿಸಬೇಕಾದ ರಸ್ತೆ ಸುರಕ್ಷತಾ ನಿಯಮಗಳು ಹಾಗೂ ಹೊಸದಾಗಿ ಜಾರಿಗೆ ಬಂದಂತಹ ರಸ್ತೆ ಸುರಕ್ಷತಾ ಕಾಯಿದೆಯಲ್ಲಿನ ಅಂಶಗಳನ್ನು ಸವಿಸ್ತಾರವಾಗಿ ಚಾಲಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಅವಧಿಯಲ್ಲಿ ಚಾಲಕರಿಗಾದ ವೈಯಕ್ತಿಕ ಅನುಭವಗಳ ಬಗ್ಗೆ ಅವರ ಜೊತೆ ಚರ್ಚಿಸಿದರು.
ಎರಡನೇ ಅವಧಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಸರಸ್ವತಿ ಪದವಿಪೂರ್ವ ಕಾಲೇಜು, ಕಡಬ ಇದರ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ನಡೆಸಿಕೊಟ್ಟರು. ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳು ಹಾಗೂ ಪ್ರಯೋಗಿಕ ದೃಶ್ಯಾವಳಿಗಳನ್ನು ಆಯೋಜಿಸುವುದರ ಮೂಲಕ ಚಾಲಕರಲ್ಲಿ ವ್ಯಕ್ತಿತ್ವ ವಿಕಸನದ ಅರಿವನ್ನು ಮೂಡಿಸಿದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಭಟ್ ಕೊಂಕೋಡಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರು ಮಾತನಾಡುತ್ತಾ ಚಾಲನೆಗೆ ಅನುಭವ ಅಗತ್ಯ, ಸಂಸ್ಥೆಯ ಜೊತೆ ಇದ್ದು, ಸಂಸ್ಥೆಯ ಗೌರವಕ್ಕೆ ಧಕ್ಕೆ ಬಾರದಂತೆ ವರ್ತಿಸಿ, ಸಂಸ್ಥೆಯ ಏಳಿಗೆಗೆ ಸಹಕರಿಸಿ ಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣ ಘಟಕದ ತರಬೇತಿ ಸಂಯೋಜಕರಾದ ಶ್ರೀ ರಘುರಾಜ್ ಹಾಗೂ ವಾಹನ ಚಾಲಕರ ಮೇಲ್ವಿಚಾರಕರಾದ ಚರಣ್ ಇವರು ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಚಾಲಕರಾದ ಬೋಜಪ್ಪ ಗೌಡರು ಪುತ್ತೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಶೀಯುತ ಆನಂದ ಗೌಡ ಇವರಿಗೆ ಸಂಸ್ಥೆಯ ಪರವಾಗಿ ನೆನಪಿನ ಕಾಣಿಕೆ ನೀಡಿದರು.
ವಿವೇಕಾನಂದ ಪಾಲಿಟೆಕ್ನಿಕ್ನ ಸಿವಿಲ್ ವಿಭಾಗದ ಉಪನ್ಯಾಸಕರಾದ ಶ್ರೀ ಸಂದೇಶ್ ಮಯ್ಯ ಹಾಗೂ ಅಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಶ್ರೀ ವಿನ್ಯಾಸ್ ಪಿ.ಕೆ. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ. ಎಸ್ ಪ್ರಾರ್ಥಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ಇವರು ಧನ್ಯವಾದ ಸಮರ್ಪಿಸಿದರು.