• 08251 231197
  • vptputtur@yahoo.co.in

2012 ರ ಫೆಬ್ರವರಿ 16, 17 ಮತ್ತು 18 ರಂದು ನಡೆದ ರಜತಮಹೋತ್ಸವ ಸಮಾರಂಭದ ಸಂಕ್ಷಿಪ್ತ ವರದಿ

ವಿವೇಕಾನಂದ ತಾಂತ್ರಿಕ ವಿದ್ಯಾಲಯದ ರಜತಮಹೋತ್ಸವ ಸಮಾರಂಭವು ಶ್ರೀ ಧಾತೃನಾಮ ಸಂವತ್ಸರದ ಮಾಘ ಶುದ್ಧ ದಶಮಿ, ಎಕಾದಶಿ ಹಾಗೂ ದ್ವಾದಶಿಗಳಂದು ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್‍ಯಕ್ರಮಗಳೊಂದಿಗೆ ಔಚಿತ್ಯಪೂರ್ಣವಾಗಿ ಬಹಳ ಸಂಭ್ರಮದಿಂದ ಜರಗಿತು.

ದಿನಾಂಕ : 16-02-2012 – ಗುರುವಾರ

ತಾಂತ್ರಿಕ ವಿದ್ಯಾಲಯದ ರಜತಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವು ಮೂಡಬಿದ್ರೆಯ ಶ್ರೀ ದಿಗಂಬರ ಜೈನಮಠದ ಭಾರತಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮೀಜಿಗಳಿಂದ ಪೂರ್ವಾಹ್ನ 11.00ಗಂಟೆಗೆ ವಿದ್ಯುಕ್ತವಾಗಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಹರಸಲು ಬಂದ ಶ್ರೀಗಳನ್ನು ಹಾಗೂ ಗಣ್ಯರನ್ನು ರಜತಮಹೋತ್ಸವ ಸಮಿತಿಯ ಸದಸ್ಯರು, ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡರು. ದೀಪ ಬೆಳಗುವುದರ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಿದ ಶ್ರೀಗಳು ಶಿಕ್ಷಣಕ್ಷೇತ್ರ ಬಲಿಷ್ಠವಾದಾಗ ಎಲ್ಲಾ ಸಮಸ್ಯೆಗಳು ತನ್ನಿಂದತಾನಾಗಿಯೇ ಪರಿಹಾರವಾಗುತ್ತದೆ. ತಾಂತ್ರಿಕ ಶಿಕ್ಷಣವು ಜಗತ್ತಿಗೆ ಬೇಕಾದ ಶಿಕ್ಷಣವಾಗಿದೆ. ಮಹಾನ್ ಪುರುಷ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಲಿ ಎಂಬ ಅಭಿಪ್ರಾಯದ ಆಶೀರ್ವಚನವನ್ನು ನೀಡುವುದರ ಮೂಲಕ ಸಂಸ್ಥೆಯನ್ನು ಹರಸಿದರು.

ಉದ್ಘಾಟನಾ ಸಮಾರಂಭ:

ಪೂರ್ವಾಹ್ನ ಸಮಯ 11.00 ರ ಹೊತ್ತಿಗೆ ಶ್ರೀ ವಿನಾಯಕ ಸ್ತುತಿಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಮಾಜಿ ಶಾಸಕ ಶ್ರೀ ಕೆ. ರಾಮಭಟ್ ಸಭೆಗೆ ಪರಿಚಯಿಸಿ ಸ್ವಾಗತಿಸಿದರು ಹಾಗೂ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಿದ್ದ ಸರಳ ಸಜ್ಜನಿಕೆಯ ರಾಜಕಾರಣಿ  ಡಾ| ವಿ. ಯಸ್. ಆಚಾರ್ಯ ರವರ ದಿವ್ಯಾತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬುದಾಗಿ ಪ್ರಾರ್ಥಿಸಿ, ಮೌನಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಬೇಕಾಗಿದ್ದ  ಡಾ| ವಿ.ಯಸ್. ಆಚಾರ್ಯರ  ಸ್ಥಾನವನ್ನು ಕರ್ನಾಟಕ ಸರಕಾರದ ದೆಹಲಿಯ ವಿಶೇಷ  ಪ್ರತಿನಿಧಿಯೂ, ಮಾಜಿ ಕೇಂದ್ರ ಸಚಿವರೂ ಆದ ಶ್ರೀ ವಿ. ಧನಂಜಯ ಕುಮಾರ್ ಇವರು ತುಂಬಿಕೊಟ್ಟರು. ಅಧ್ಯಕ್ಷತೆಯನ್ನು ವಹಿಸಿದ ಮಾನ್ಯರು ಮೊದಲಿಗೆ ಟೆಕ್ನೋಬಿಟ್ -ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಬಳಿಕ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ನಮ್ಮ ದೇಶ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯವಿದೆ’ ಎಂದು ಅಭಿಪ್ರಾಯ ಪಟ್ಟರು. ಹಾಗೆಯೇ ಶಿಕ್ಷಣಕ್ಷೇತ್ರಕ್ಕೆ ಆದ್ಯತೆ ನೀಡಿ ದೂರದೃಷ್ಟಿಯಿಂದ ಹಲವು ಯೋಜನೆ ರೂಪಿಸಿದ್ದ ಮಾನ್ಯ ಆಚಾರ್ಯರವರ ಯೋಜನೆಯನ್ನು ಸಾಕಾರಗೊಳಿಸಬೇಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ನಳಿನ್ ಕುಮಾರ್ ಕಟೀಲು ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ ಇವರು ನೀರು ನೈರ್ಮಲೀಕರಣ ಘಟಕ ದ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಇವರು ಮೌಲ್ಯಾಧಾರಿತ ಮತ್ತು ನೈತಿಕಶಿಕ್ಷಣ ನೀಡುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಗಳ ಮುಖಾಂತರ ಇನ್ನಷ್ಟು ಪ್ರತಿಭೆಗಳು ಬೆಳಗಿ ದೇಶಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು. ಹಾಗೆಯೇ ರಾಜಕೀಯ ಕ್ಷೇತ್ರದವರಿಗೆ ದೇಶದ ಬಗ್ಗೆ ಚಿಂತನೆ ಬೆಳೆಸಿಕೊಳ್ಳುವಂತಹ ತರಬೇತಿ ನೀಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಇಂತಹ ತರಬೇತಿ ನೀಡಲು ವಿವೇಕಾನಂದ ವಿದ್ಯಾಸಂಸ್ಥೆ ಮುಂದೆ ಬರಬೇಕು. ಈ ಮೂಲಕ ಸಂಸ್ಕಾರಯುತ ರಾಜಕಾರಣಿಗಳು ಮೂಡಿ ಬರಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಸಂಧರ್ಭದಲ್ಲಿ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಎಂ. ಇವರು ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ರಜತಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ತಾಲೂಕು ಮಟ್ಟದ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರು, ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ವಂದಿಸಿದರು. ಹಿರಿಯ ಉಪಾನ್ಯಾಸಕ ಶ್ರೀ ಹರೀಶ್ ಭಟ್ ಹಾಗೂ ಡಾ| ಸುಧಾರಾವ್ ಕಾರ್ಯಕ್ರಮ ವನ್ನು ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನಾ ಸಮಾರಂಭವು ಸಂಪನ್ನಗೊಂಡಿತು.

17-02-2012-ಶುಕ್ರವಾರ

ರಜತಮಹೋತ್ಸವ ಸಂಭ್ರಮದ ಎರಡನೇ ದಿನ ಹಮ್ಮಿಕೊಂಡ ಹಿರಿಯ ವಿದ್ಯಾರ್ಥಿಗಳ ಕುಟುಂಬ ಸಮ್ಮಿಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಡೆದ ಸಭಾಕಾರ್ಯಕ್ರಮವು ಸಾಯಂಕಾಲ 5.30ರ ಹೊತ್ತಿಗೆ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಸುಧಾಕರ ಶೆಣೈ, ಪ್ರಾಜೆಕ್ಟ್ ಕನ್ಸಲ್ಟೆಂಟ್ ಮಂಗಳೂರು, ಇವರು ವಹಿಸಿಕೊಂಡಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮೊದಲಿಗೆ ಹಿರಿಯ ವಿದ್ಯಾರ್ಥಿಗಳಿಂದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕವೃಂದಕ್ಕೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಬಾಗವಹಿಸಿದ ಪೇಜಾವರ ಮಠದ ಕಿರಿಯಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿಯವರಿಂದ ಮೊದಲಿಗೆ ಹಿರಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಗುರುವಂದನೆಯನ್ನು ನೆರವೇರಿಸಿ ಒಂದು ವಿದ್ಯಾಸಂಸ್ಥೆಯಿಂದ ಇನ್ನಷ್ಟು ಸಂಸ್ಥೆಗಳನ್ನು ಹುಟ್ಟುಹಾಕಿದರೆ ದೇಶದ ಅಭಿವೃದ್ಧಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಉತ್ತಮ ಸಂಸ್ಕಾರಯುತ ಶಿಕ್ಷಣ ಕೊಟ್ಟಿದೆ ಎಂಬುದನ್ನು ಗುರುವಂದನೆ ತೋರಿಸಿ ಕೊಟ್ಟಿದೆ ಎಂದು ನುಡಿದು ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇದರ ಉಪನಿರ್ದೇಶಕರಾದ ಶ್ರೀ ರಾಜು ರವರು ಉದಾರೀಕರಣದಿಂದಾಗಿ ಇಂದು ದೇಶದಲ್ಲಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಿದೆ. ಮಹಿಳೆಯರು ಕೂಡಾ ಪುರುಷರಿಗೆ ಸಮಾನವಾಗಿ ತಾಂತ್ರಿಕ ಶಿಕ್ಷಣ ಪಡೆಯುವಂತಾಗಿದೆ. ಹಿರಿಯ ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾಸಂಸ್ಥೆಯ ಮೇಲೆ ಪ್ರೀತಿ ಇಟ್ಟು ಅದರ ಅಭಿವೃದ್ಧಿಗೆ ಕೈ ಜೋಡಿಸಿದರೆ ಸಮಾಜಕ್ಕೆ ಅನುಕೂಲವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಡ್ಗಿ ಸುಧಾಕರ ಶೆಣೈಯವರು ತಾಂತ್ರಿಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂಗ್ಲೀಷ್‍ನಲ್ಲಿ ಹಿಡಿತ ಸಾಧಿಸುವ ಅಗತ್ಯವಿದೆ. ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಅದನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ನುಡಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಜಿ ಸಚಿವ ಶ್ರೀ ನಾಗರಾಜ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ತಾವು ವಿದ್ಯೆ ಕಲಿತ ಸಂಸ್ಥೆಗಳನ್ನು ನೆನಪಿನಲ್ಲಿಟ್ಟು ಅದರ ಅದರ ಅಭಿವೃದ್ಧಿಗೆ ಸಹಕರಿಸುವುದು ಬಹುಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್. ಎಸ್.ಎಸ್. ದಕ್ಷಿಣ ಪ್ರಾಂತ ಕಾರ್ಯವಾಹ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಮಾತನಾಡಿ ವಿದ್ಯೆ ಕೆಳಮಟ್ಟದಲ್ಲಿರುವವರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು, ಆಗ ಅದು ಸಾರ್ಥಕವಾಗುತ್ತದೆ. ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರೂ, ರಜತಮಹೋತ್ಸವ ಸಮಿತಿಯ ಅಧ್ಯಕ್ಷರೂ ಆದ ಶ್ರೀ ಕೆ. ರಾಮಭಟ್ ರವರು ಮಾತನಾಡಿ, ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ‘ಗುರುವಂದನೆ’ ಕಾರ್ಯಕ್ರಮ ಮಾಡುವ ಮೂಲಕ ಈ ಪರಿಸರಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ| ಎ.ವಿ.ನಾರಾಯಣ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಶ್ರೀ ಚಂದ್ರಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಶ್ರೀ ಬಲರಾಮ ಆಚಾರ್ಯ ರವರು ವಂದಾನಾರ್ಪಣೆಗೈದರು.

ಪೂರ್ವಾಹ್ನ ವಾಸ್ತು ಎನ್ನುವ ವಿಷಯದ ಬಗ್ಗೆ ಉಪನ್ಯಾಸಕ ಶ್ರೀ ರವಿರಾಮ ಎಸ್. ಮುಖ್ಯಸ್ಥರು , ಸಿವಿಲ್ ವಿಭಾಗ ಇವರಿಂದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಸಭಾಕಾರ್ಯಕ್ರಮದ ಮೊದಲಿಗೆ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ನಂತರ ವಿಹಂಗಮ ಪುತ್ತೂರು ಘಟಕ ಪ್ರಸ್ತುತ ಪಡಿಸಿದ ಹಿರಿಯ ವಿದ್ಯಾರ್ಥಿಗಳ ‘ಇಂದ್ರಜಿತ್ ಕಾಳಗ’ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಿತು. ಸಭಾಕಾರ್ಯಕ್ರಮದ ನಂತರ ವಿಹಂಗಮ ಬೆಂಗಳೂರು ಘಟಕ ಪ್ರಸ್ತುತ ಪಡಿಸಿರುವ ರಿಚಾರ್ಡ್ ಲೂಯಿಸ್ ನೇತೃತ್ವದಲ್ಲಿ ನಗೆಹಬ್ಬ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಟಿವಿ ಕಲಾವಿದರಾದ ಶ್ರೀ ಮೈಸೂರು ಆನಂದ್, ಶ್ರೀ ಸತ್ಯ ಮೂರ್ತಿ, ಶ್ರೀ ನರಸಿಂಹಮೂರ್ತಿ ಇವರುಗಳು ಸುಮಾರು 3 ಗಂಟೆಗಳ ಕಾಲ ನಡೆದ ಅಪಾರ ಜನಸ್ತೋಮವನ್ನು ನಗೆ ಕಡಲಲ್ಲಿ ಮುಳುಗಿಸಿದರು.

ಇದರ ಬೆನ್ನಿಗೆ ವಿಹಂಗಮ ಘಟಕ ಮಂಗಳೂರು ಪ್ರಸ್ತುತ ಪಡಿಸಿದ ಕುದ್ರೋಳಿ ಗಣೇಶ್ ರವರ ‘ವಿಸ್ಮಯ ಜಾದೂ ಜಗತ್ತು’ ಕಾರ್ಯಕ್ರಮ ಜರಗಿತು. ಸುಮಾರು 2 ಗಂಟೆಗಳ ಕಾಲ ನೆರೆದ ಅಪಾರ ಜನಸಂದಣಿಯನ್ನು ಈ ಕಾರ್ಯಕ್ರಮ ಜಾದೂ ಜಗತ್ತಿಗೆ ಕರೆದೊಯ್ಯಿತು. ಪಾಲಿಟೆಕ್ನಿಕ್ ಇತಿಹಾಸದಲ್ಲೇ ಸೇರದಷ್ಟು ಜನಸಂದಣಿ ಈ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು.

18-02-2012- ಶನಿವಾರ

ವಿವೇಕಾನಂದ ತಾಂತ್ರಿಕ ವಿದ್ಯಾಲಯದ ರಜತಮಹೋತ್ಸವದ ಸಮರೋಪ ಸಮಾರಂಭ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಪುತ್ತೂರಿನ ಶಾಸಕಿ ಶ್ರೀಮತಿ ಮಲ್ಲಿಕಾಪ್ರಸಾದ್ ರವರು ವಹಿಸಿಕೊಂಡಿದ್ದರು. ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ತಾಂತ್ರಿಕ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡುತ್ತಿರುವ ತಾಂತ್ರಿಕ ಶಿಕ್ಷಣ ಪಡೆದ ವಿವೇಕಾನಂದದ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಮಹತ್ತರ ಕೊಡುಗೆಯಾಗಬೇಕು. ಎಂದು ಹರಸಿದರು. ಜೊತೆಗೆ ಕಳೆದ 20 ವರ್ಷಗಳಿಂದ ನಿರಂತರ ಸೇವೆಯನ್ನು ಸಲ್ಲಿಸಿದ ಅದ್ಯಾಪಕ ಹಾಗೂ ಸಿಬ್ಬಂದಿ ವರ್ಗದವರನ್ನು ಗೌರವಿಸುವ ಕಾರ್ಯಕ್ರಮವನ್ನು ಶ್ರೀ ಗಳು ನೆರವೇರಿಸಿಕೊಟ್ಟರು.

ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಬೆಳ್ಳಿಹಬ್ಬದ ವಿಶೇಷ ಸಂಚಿಕೆ ನಿರ್ಮಾತೃ ವನ್ನು ಬಿಡುಗಡೆಗೊಳಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯ ಮತ್ತು ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ರಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಕೊಡುಗೆಯಾಗಬೇಕು. ಜವಾಬ್ದಾರಿ ಅರಿತು ನಡೆದಾಗ ತಪ್ಪುಗಳು ನಡೆಯಲು ಸಾಧ್ಯವಿಲ್ಲ ಎಂದು ತಿಳಿಯಪಡಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಸುರೇಶ್ ಕುಮಾರ್ ಮಾತನಾಡಿ ದೇಶಭಕ್ತಿಯಿಂದ ಕೂಡಿದ ಶಿಕ್ಷಣ ನೀಡುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಗಳಂತಹ ಶಿಕ್ಷಣಸಂಸ್ಥೆಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಅಲಂಕರಿಸಿದ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್ ಶಿಕ್ಷಣ ಯಾವತ್ತಿಗೂ ಮಾರಾಟದ ಸರಕು ಆಗಬಾರದು. ದೇಶಭಕ್ತಿಯಿಂದ ಕೂಡಿದ ಶಿಕ್ಷಣಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡಿರುವ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಾಡನ್ನು ಪ್ರೀತಿಸುವುದರ ಜತೆಗೆ ದೇಶದ ಆಸ್ತಿಗಳಾಗಬೇಕು. ಎಂದು ನುಡಿದರು.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಎಸ್.ಆರ್. ರಂಗಮೂರ್ತಿ ಸ್ವಾಗತಿಸಿ ಪರಿಚಯಿಸಿದರು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಬೆಳ್ಳಿಹಬ್ಬದ ಪ್ರಯುಕ್ತ ಎರ್ಪಡಿಸಲಾಗಿದ್ದ ‘Tecknowbit-2012’ ವಸ್ತುಪ್ರದರ್ಶನದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀಮತಿ ವತ್ಸಲಾ ರಾಜ್ಞಿ ಮತ್ತು ಉಪನ್ಯಾಸಕಿ ಶ್ರೀಮತಿ ಉಷಾ ಕಿರಣ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿ ಎಮ್ ಇವರು ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಜತಮಹೋತ್ಸವದ 3 ದಿನಗಳ ಕಾರ್ಯಕ್ರಮವು ಮುಕ್ತಾಯಗೊಂಡಿತು. ರಜತ ಮಹೋತ್ಸವದ ವಿಶೇಷ ಆಕರ್ಷಣೆ ‘Tecknowbit-2012’ ರಾಜ್ಯಮಟ್ಟದ ವಸ್ತುಪ್ರದರ್ಶಿನಿಯಲ್ಲಿ ದ.ಕ.ಜಿಲ್ಲೆಯ ಬೇರೆ ಬೇರೆ ಫ್ರೌಢಶಾಲೆಗಳು, ಪಾಲಿಟೆಕ್ನಿಕ್‌ಗಳು, ಐ.ಟಿ.ಐ. ಗಳು ಪಾಲ್ಗೊಂಡಿದ್ದವು. ಈ ವಿದ್ಯಾ ಸಂಸ್ಥೆಗಳು ತಮ್ಮ ತಮ್ಮ ವಿನೂತನ ಮಾದರಿಗಳನ್ನು ಮೂರು ದಿನಗಳ ಕಾಲ ಸಾರ್ವಜನಿಕರಿಗೆ ವೀಕ್ಷಿಸಲು ಸಹಕರಿಸಿದರು. ಉತ್ತಮ ವೆನಿಸಿದ ಮಾದರಿಗಳಿಗೆ ಬಹುಮಾನವನ್ನು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಭಾಗವಹಿಸಿದ ಬಗ್ಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಇನ್ನೊಂದು ಕಡೆ (PACE) Puttur Association of Civil Engineers ಇವರ ಸಹಯೋಗದೊಂದಿಗೆ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣದಲ್ಲಿ ಗೃಹ ಉಪಯೋಗಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಇವುಗಳು ಸಾರ್ವಜನಿಕರ ಮುಕ್ತ ಕಂಠದ ಪ್ರಶಂಶೆಗೆ ಪಾತ್ರವಾದವು.

ರಜತಮಹೋತ್ಸವದ ಕಾರ್‍ಯಕ್ರಮದ ಯಶಸ್ಸಿಗೆ ಸಹಕರಿಸಿದ

೧.  ಯಂ.ಡಿ.ಎಸ್. ಪುತ್ತೂರು -ಬೆಳಕು ಧ್ವನಿವರ್ಧಕ ಪಾತ್ರೆಗಳು ಮತ್ತು ಶಾಮಿಯಾನ ವ್ಯವಸ್ಥೆ

೨. ಪಾಂಡಿರಾಜ ಬಳ್ಳಮಂಜ ಬೆಳ್ತಂಗಡಿ – ಭೋಜನ ಮತ್ತು ಉಪಾಹಾರ ವ್ಯವಸ್ಥೆ

೩. ಶಶಿ ವಿಡಿಯೋ ವಿಷನ್ – ಸಂಪೂರ್ಣ ವಿಡಿಯೋ ಚಿತ್ರೀಕರಣ

೪.  ಸಂಪೂರ್ಣ ಛಾಯಾಚಿತ್ರಗಾರರು

ಇವರ ಸಹಕಾರವನ್ನು ರಜತಮಹೋತ್ಸವ ಸಮಿತಿ ಸ್ಮರಿಸುತ್ತದೆ.

Highslide for Wordpress Plugin