ಪುತ್ತೂರು: ಯಶಸ್ವಿಗೆ ಕಠಿಣ ದುಡಿಮೆ ಅನಿವಾರ್ಯ, ನೀವು ದೃಢವಾಗಿರುವಾಗ ಅಶಕ್ತರಿಗೆ ಸಹಾಯ ಮಾಡಿ ಎಂದು ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಘಟಕದ ಡಿ.ಜಿ.ಎಂ. ಶ್ರೀ ಹೆಚ್. ಎಸ್. ಕೃಷ್ಣಕುಮಾರ್ ಇವರು ವಿದ್ಯಾರ್ಥಿಗಳಿಗೆ ಕರೆನೀಡಿದರು. ಅವರು ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ದಿನಾಂಕ 29-3-2014 ರಂದು ಜರಗಿದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಾ ಈ ವಿಷಯವನ್ನು ತಿಳಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಶ್ರೀ ಎಸ್.ಆರ್.ರಂಗಮೂರ್ತಿ ಇವರು ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಒಳ್ಳೆಯ ಮನಸ್ಸಿನಿಂದ ಉತ್ಕೃಷ್ಟ ಕೆಲಸ ಮಾಡಿದರೆ ಉನ್ನತಿ ಸಾಧ್ಯವೆಂದು ತಿಳಿಸಿದರು.
ಈ ಸಮಾರಂಭಕ್ಕೆ ಆಗಮಿಸಿದ ಇನೋರ್ವ ಅತಿಥಿ ಪಾಲಿಟೆಕ್ನಿಕ್ನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ ಆರ್ಕ್ ಟಚ್ ಸಂಸ್ಥೆಯ ಮಾಲಕರಾದ ಶ್ರೀ ಯನ್. ಟಿ. ರಾಜ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಯೋಚನೆಗಳನ್ನಾಗಿ, ಯೋಚನೆಗಳನ್ನು ಯೋಜನೆಗಳಾಗಿ ಪರಿವರ್ತಿಸಿ ಮುಂದುವರಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸುವುದು ಸಾಧ್ಯವೆಂದು ತಿಳಿಸಿದರು.
ಸಂಸ್ಥೆಯ ದ್ವಿತೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಜ್ಜನ್ ಆಚಾರ್ಯ ಇವರ ಪ್ರಾರ್ಥನೆಯಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ, ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ವಿ.ನಾರಾಯಣ ಇವರು ಅತಿಥಿಗಳನ್ನು ಮತ್ತು ಸಭಾಸದರನ್ನು ಸ್ವಾಗತಿಸಿದರು. ಪಾಲಿಟೆಕ್ನಿಕ್ನ ಪ್ರಾಚಾರ್ಯ ಶ್ರೀ ಗೋಪಿನಾಥ್ ಶೆಟ್ಟಿ ಇವರು ಸಂಸ್ಥೆಯ 2013-14 ರ ಸಾಲಿನ ಶೈಕ್ಷಣಿಕ ವರದಿಯನ್ನು ಸಭೆಯ ಮುಂದಿಟ್ಟರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಪಾಲಿಟೆಕ್ನಿಕ್ನ ಸಂಚಾಲಕರಾದ ಶ್ರೀ ಬಂಗಾರಡ್ಕ ಮುರಳೀಧರ ಭಟ್ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ನ ಸ್ಥಾಪಕ ಸಂಚಾಲಕರಾಗಿದ್ದ ಶ್ರೀ ಉರಿಮಜಲು ರಾಮಭಟ್ ಮತ್ತು ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು. ಪಾಲಿಟೆಕ್ನಿಕ್ನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್ ನಿರ್ವಹಿಸಿದ ಈ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿ ನಾಯಕ ವಿವೇಕ ಎಸ್. ಧನ್ಯವಾದಗಳನ್ನರ್ಪಿಸಿದರು.