ವಿದ್ಯಾರ್ಥಿಗಳು ಒಳ್ಳೆಯ ಕನಸು ಕಂಡು ಸತತ ಪ್ರಯತ್ನ ಮಾಡಿದಾಗ ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸುಲಭ ಸಾಧ್ಯ ಎಂದು ಉಚ್ಛನ್ಯಾಯಾಲಯದ ವಕೀಲ, ಯೂತ್ ಫಾರ್ ನೇಷನ್ ಸಂಸ್ಥೆಯ ರಾಷ್ಟ್ರಾಧ್ಯಕ್ಷರಾದ ಪದ್ಮಪ್ರಸಾದ್ ಹೆಗ್ಡೆ ಮಂಗಳೂರು ಅವರು ಹೇಳಿದರು. ಅವರು ನೆಹರು ನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎ. ೬ರಂದು ನಡೆದ ಸಂಸ್ಥೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜಿನ ಹೊರಗೆ ಬಂದ ಮೇಲೆ ಕೆಲಸಕ್ಕಾಗಿ ಇತರರನ್ನು ಅವಲಂಭಿಸದೆ ಸ್ವ ಉದ್ಯೋಗದ ಕಡೆ ಮುಖ ಮಾಡಬೇಕು ಎಂದು ಅವರು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದ ವೇ| ಮೂ| ಹರಿ ನಾರಾಯಣ ದಾಸ ಅಸ್ರಣ್ಣರವರು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಲೋಕಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್, ವಿವೇಕಾನಂದ ಪಾಲಿಟೆಕ್ನಕ್ ನ ಹಳೆ ವಿದ್ಯಾರ್ಥಿ ರಾಜೇಶ್ ರೈ ಶುಭ ಹಾರೈಸಿದರು.
ಸನ್ಮಾನ
ಸ್ಕ್ಯಾಡ್ ಸೆಂಟರ್ ನಡೆಸಿದ ಅಂತರಾಷ್ಟ್ರೀಯ ಡ್ರಾಯಿಂಗ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿ ಡಿಪಿನ್ ಕೆ.ವಿ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸ್ಕ್ಯಾಡ್ ಸೆಂಟರ್ ನ ಅನಿಲ್ ಸ್ವಿಕ್ವೇರಾ ಅವರು ಸಂಸ್ಥೆಯ ವತಿಯಿಂದ ಬಹುಮಾನವಾಗಿ ರೂ. ೨೫ ಸಾವಿರ ನಗದನ್ನು ಹಸ್ತಾಂತರಿಸಿದರು. ಪಿಡಬ್ಯೂಡಿ ಸಹಾಯಕ ಇಂಜಿನಿಯರ್ ರಾಜೇಶ್ ರೈಯವರು ರೂ.೨ ಸಾವಿರ ಪ್ರೋತ್ಸಾಹಕ ಬಹುಮಾನ ನೀಡಿದರು.
ಬಹುಮಾನ ವಿತರಣೆ
ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾದ ಕ್ರೀಡಾಕೂಟ , ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರೋತ್ಸಾಹ ಬಹುಮಾನ, ದತ್ತಿನಿಧಿ ಬಹುಮಾನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುಷ್, ಜೊತೆ ಕಾರ್ಯದರ್ಶಿ ಕಾವ್ಯಶ್ರೀ ಹಾಗೂ ದರ್ಶನ್ ಜೆ.ಎಂ., ಪ್ರಮಿತ್ ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಎ ವಿ ನಾರಾಯಣ ಸ್ವಾಗತಿಸಿದರು. ಪ್ರಾಂಶುಪಾಲರು ಶ್ರೀ ಗೋಪಿನಾಥ ಶೆಟ್ಟಿ ವರದಿ ಮಂಡಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್. ಆರ್. ರಂಗಮೂರ್ತಿ, ವಿವೇಕಾನಂದ ಪಾಲಿಟೆಕ್ನಿಕ್ ಸಂಚಾಲಕರು ಶ್ರೀ ಮುರಳೀಧರ ಭಟ್, ಆಡಳಿತ ಮಂಡಳಿ ಸದಸ್ಯ ಮುರಳಿ ಕೆ.ಟಿ. ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಉಪನ್ಯಾಸಕ ರವಿರಾಮ್ ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಕೆ. ರಾಮ ಭಟ್ ಮತ್ತಿತರರು ಭಾಗವಹಿಸಿದ್ದರು. ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು.