ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ದಿನಾಂಕ 11-9-2024ರ ಬುಧವಾರ ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ “ಯುವ ರೆಡ್ ಕ್ರಾಸ್ ಘಟಕ ವಿವೇಕಾನಂದ ಪಾಲಿಟೆಕ್ನಿಕ್” ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ ನೆರವೇರಿಸಿ “ರಕ್ತದ ಅಗತ್ಯವಿದ್ದಾಗ ರಕ್ತದಾನ ಮಾಡಿದರೆ ಅದನ್ನು ಅವಶ್ಯಕತೆ ಇರುವ ರೋಗಿಗಳಿಗೆ ನೀಡುವಲ್ಲಿ ಸಹಾಯವಾಗುತ್ತದೆ. ಇದೊಂದು ಉತ್ತಮ ಕಾರ್ಯ” ಎಂದು ಹೇಳಿ ಶುಭಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ|| ಸೀತಾರಾಮ ಭಟ್, ವೈದ್ಯಾಧಿಕಾರಿ ರೋಟರಿ-ಕ್ಯಾಂಪ್ಕೋ ರಕ್ತನಿಧಿ ಕೇಂದ್ರ ಪುತ್ತೂರು ಮಾತನಾಡುತ್ತಾ “ಯಾವುದೇ ದಾನ ಮಾಡಿದಾಗ ನಾವು ನಮ್ಮಲ್ಲಿದ್ದದ್ದನ್ನು ಕಳೆದುಕೊಳ್ಳುತ್ತೇವೆ. ಆದರೆ ರಕ್ತದಾನದಿಂದ ನಾವು ಗಳಿಸುವುದೇ ಹೆಚ್ಚು. ರಕ್ತ ಎಂದರೆ ಪೋಷಕ ದ್ರವ್ಯ. ರಕ್ತಕ್ಕೆ ಪರ್ಯಾಯ ವಸ್ತು ಯಾವುದೂ ಇಲ್ಲ. ಇದು ದೇಹದಲ್ಲಿ ಸಂಚರಿಸಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಎಂದು ಹೇಳುತ್ತಾ ರಕ್ತದಲ್ಲಿರುವ ವಿವಿಧ ಅಂಶಗಳು ಅವುಗಳ ಕಾರ್ಯಪ್ರವೃತ್ತಿಯ ಬಗ್ಗೆ ಬಹಳ ಉಪಯುಕ್ತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಜೀವನದಲ್ಲಿ ಉದ್ದೇಶಗಳನ್ನು ಸಾಧಿಸಬೇಕಾದರೆ ಯಾವುದೇ ಕೆಲಸವನ್ನು ಯೋಚಿಸಿ ಮನಃಪೂರ್ವಕವಾಗಿ ಪ್ರಕೃತಿಯೊಂದಿಗೆ ಬೆರೆತು ಕ್ರೀಯಾಶೀಲರಾಗಿ ಕೃತಜ್ಙತೆಯಿಂದ ಮಾಡುತ್ತೇನೆ ಎಂಬ ಸಂಕಲ್ಪದೊಂದಿಗೆ ಮಾಡಿ ಒಳ್ಳೆಯ ಹೆಸರನ್ನು ಗಳಿಸಬೇಕು ಎಂದು ನುಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಪಾಲಿಟೆಕ್ನಿಕ್‌ನ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ ಮಾತನಾಡುತ್ತಾ “ರಕ್ತದಾನ ಒಂದು ಪುಣ್ಯದ ಕೆಲಸ. ಈ ಕಾರ್ಯದಲ್ಲಿ ಭಾಗಿಗಳಾಗಿ” ಎಂದು ನುಡಿದರು. ಈ ಸಂದರ್ಭದಲ್ಲಿ 75 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಮ್ಮದ್ ಸಾಹೇಬ್ ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಸಿಟಿ, ರಾಮಚಂದ್ರ ಕಾರ್ಯದರ್ಶಿಗಳು ರೋಟರಿ ಕ್ಲಬ್ ಪುತ್ತೂರು, ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ರೋಟರಿ ಸದಸ್ಯರಾದ ಮಾರ್ಟಿಸ್, ಆಡಳಿತ ಮಂಡಳಿಯ ಸದಸ್ಯರಾದ ರವಿಮುಂಗ್ಲಿಮನೆ, ಅಚ್ಯುತ ಪ್ರಭು, ಈಶ್ವರ ಚಂದ್ರ, ವೈದ್ಯಕೀಯ ತಂಡ, ಎಬಿವಿಪಿ ಘಟಕದ ಸದಸ್ಯರು, ಉಪನ್ಯಾಸಕ/ಉಪನ್ಯಾಸಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಪ್ರಾಂಶುಪಾಲರಾದ ಮುರಳಿಧರ್ ಎಸ್. ಸ್ವಾಗತಿಸಿದರು. ಧನ್ಯವಾದವನ್ನು ಪ್ರಜ್ವಲ್ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ನೆರವೇರಿಸಿದರು. ಸುಜನ್ಯ ತಂಡದವರು ಪ್ರಾರ್ಥಿಸಿದರು. ವಿಜೇತ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಕರ‍್ಯಕ್ರಮವನ್ನು ನಿರೂಪಿಸಿದರು ಹಾಗೂ ಪ್ರಶಾಂತ್ ಕುಮಾರ್ ಉಪನ್ಯಾಸಕರು ಮೆಕ್ಯಾನಿಕಲ್ ವಿಭಾಗ ಹಾಗೂ ಅನಿಲ್ ಕುಮಾರ್ ಮೆಕ್ಯಾನಿಕಲ್ ವಿಭಾಗ ಕರ‍್ಯಕ್ರಮವನ್ನು ಆಯೋಜಿಸಿದ್ದರು.