• 08251 231197
  • vptputtur@yahoo.co.in

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ

“ಸಾಮಾನ್ಯ ಸ್ಥಿತಿಯಿಂದ ಅಸಾಮಾನ್ಯರಾಗುವ ಆಲೋಚನೆಯನ್ನು ಇಟ್ಟುಕೊಳ್ಳಿ” – ಡಾ.ಪ್ರಭಾಕರ್ ಭಟ್ ಕಲ್ಲಡ್ಕ
ಪುತ್ತೂರು:37 ವರ್ಷಗಳ ಇತಿಹಾಸ ಹೊಂದಿದ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ದಿನಾಂಕ 21-07-2023 ರಂದು ಗಣಪತಿಹೋಮ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು.
ಪೂಜಾ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪ್ರಭಾಕರ ಭಟ್ ಕಲ್ಲಡ್ಕ ರವರು ಮಾತನಾಡುತ್ತಾ “ಪಾಲಿಟೆಕ್ನಿಕ್ ನ ಎಲ್ಲಾ ವಿಭಾಗಗಳಿಗೂ ಅದರದೇ ಆದ ಪ್ರಾಮುಖ್ಯತೆ ಇದೆ. ಬದಲಾವಣೆಯ ಪರ್ವದಲ್ಲಿ ಭಾರತ ದೇಶದ ಬಗ್ಗೆ ಚಿಂತನೆಯನ್ನು ಮಾಡುತ್ತಾ, ಸಾಮಾನ್ಯ ಸ್ಥಿತಿಯಿಂದ ಅಸಾಮಾನ್ಯರಾಗುವ ಆಲೋಚನೆಯನ್ನು ಇಟ್ಟುಕೊಂಡು ಸ್ವಾವಲಂಬಿ ಬದುಕನ್ನ ಕಟ್ಟಿಕೊಳ್ಳುವ ಕೆಲಸವನ್ನು ಮಾಡುವ ಶಕ್ತಿಯನ್ನು ಈ ಶಿಕ್ಷಣ ಸಂಸ್ಥೆಯಿಂದ ಪಡೆದು ನೀವು ಎತ್ತರಕ್ಕೆ ಏರುವಂತಾಗಿ” ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ತುಂಬಿದಾಗ ದೇಶದ ಬಡತನ ರೇಖೆಯನ್ನು ದಾಟಲು ಸಾಧ್ಯ. ಗ್ರಾಮೀಣ ಭಾರತದಲ್ಲಿ ಇಂತಹ ಪರಿವರ್ತನೆಯನ್ನು ಮಾಡಲು ಶಿಸ್ತುಬದ್ಧ ಜೀವನದ ಸಂಕಲ್ಪ ಮಾಡಿ ಅಳವಡಿಸಿಕೊಂಡಾಗ ಅದು ನಿಮ್ಮ ಜೀವನವನ್ನು ಬದಲಿಸಬಹುದು” ಎಂದು ಶುಭ ನುಡಿದರು.
ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತ್ರಿ ಮಣಿಲ ಮಾತನಾಡುತ್ತಾ “ಈ ಪಾಲಿಟೆಕ್ನಿಕ್‌ಗೆ ಸೇರಿರುವ ವಿದ್ಯಾರ್ಥಿಗಳು ಈಗಾಗಲೇ ತಮ್ಮಲ್ಲಿರುವ ನೈಪುಣ್ಯದೊಂದಿಗೆ ತಾಂತ್ರಿಕ ತರಬೇತಿಯನ್ನು ಪಡೆದು ಉತ್ತಮ ಭವಿಷ್ಯ ರೂಪಿಸುವಂತಾಗಲಿ” ಎಂದು ಹಾರೈಸಿದರು.
ಪ್ರಾಸ್ತಾವಿಕ ಭಾಷಣವನ್ನು ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ಮಾತನಾಡುತ್ತಾ “ಕಾಲೇಜಿನ ನಿಯಮಗಳನ್ನು ಹಾಗೂ ಹೆತ್ತವರ ಜವಾಬ್ದಾರಿಯ ಬಗ್ಗೆ” ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಜಿ ಶ್ರೀ ನರಸಿಂಹ ಪೈ, ಸದಸ್ಯರುಗಳಾದ ರವಿ ಮುಂಗ್ಲಿಮನೆ, ಈಶ್ವರ ಚಂದ್ರ, ಅಚ್ಯುತ ಪ್ರಭು, ಉಷಾ ಮುಳಿಯ, ಜಯಂತಿ ನಾಯಕ್, ಸನತ್ ಕುಮಾರ್ ಹಾಗೂ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ಮುರಳೀಧರ್ ಎಸ್ ಹಾಗೂ ಪುಷ್ಪಾ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಧನ್ಯವಾದ ಸಮರ್ಪಣೆಯನ್ನು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥರಾದ ಮುರಳೀಧರ್ ಎಸ್ ಇವರು ನಡೆಸಿಕೊಟ್ಟರು.
ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಎಸ್ ಪ್ರಾರ್ಥಿಸಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ನೆರವೇರಿಸಿದರು

Highslide for Wordpress Plugin