ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಮಾರ್ಗದರ್ಶನ ಕಾರ್ಯಕ್ರಮವನ್ನು ಗಣಪತಿ ಹೋಮ ಹಾಗೂ ಸರಸ್ವತಿ ಆರಾಧನಾ ಕಾರ್ಯಕ್ರಮದೊಂದಿಗೆ ದಿನಾಂಕ: 7-10-2021 ರಂದು ನಡೆಸಲಾಯಿತು. ಸುಮಾರು 200 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇದರ ಅಂಗವಾಗಿ ಕೇಶವ ಸಂಕಲ್ಪ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಭೋದನ್ ಇದರ ಅಖಿಲ ಭಾರತ ಟೋಳಿಯ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಇವರು ಇಂದ್ರಿಯಗಳಿಗಿಂತ ಶ್ರೇಷ್ಟವಾದದ್ದು ಮನಸ್ಸು, ಮನಸ್ಸಿಗಿಂತಲೂ ಶ್ರೇಷ್ಟವಾದದ್ದು ಬುದ್ದಿ. ಭಾರತೀಯ ಸಂಸ್ಕೃತಿಯಲ್ಲಿ ಅದಕ್ಕಿಂತಲೂ ಮಿಗಿಲಾದದ್ದು ಆತ್ಮಾನಂದ. ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸುಖವಲ್ಲದೇ, ಸಮಾಜದ ಸುಖವನ್ನು ಶ್ರೇಷ್ಠ ಸುಖ ಎಂದು ತಿಳಿದುಕೊಂಡಾಗ ವಿದ್ಯೆ ಸಾರ್ಥಕವಾಗುತ್ತದೆ. ನಿಮಗೆ ನೀವೇ ಸವಾಲುಗಳನ್ನು ಹಾಕಿಕೊಂಡು ಸ್ಪರ್ಧಿಸಿ. ನನ್ನ ಸ್ಪರ್ಧೆ ನನ್ನೊಡನೆ ಎಂದು ಒಂದೊಂದೇ ಹೆಜ್ಜೆ ಮುಂದಿಡಿ ಇದೇ ಪಾಲಿಟೆಕ್ನಿಕ್‌ನ ಧ್ಯೇಯ ಕೂಡಾ ಎಂದು ನುಡಿದರು.
ಪ್ರಾಚಾರ್ಯರಾದ ಗೋಪಿನಾಥ್ ಶೆಟ್ಟಿ ಎಂ ಪ್ರಸ್ತಾವಿಕವಾಗಿ ಮಾತನಾಡುತ್ತಾ ವಿವೇಕಾನಂದ ವಿದ್ಯಾಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೆ ನೆರೆಯ ಕೇರಳ ರಾಜ್ಯದ ಪೆರ್ಲ ಸಹಿತ, ಶಿಶುಮಂದಿರಗಳಿಂದ ಹಿಡಿದು ಸ್ನಾತಕೋತ್ತರ ತರಗತಿಗಳವರೆಗೆ ಒಟ್ಟು 75 ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆ ಹಾಗೂ ಸಂಸ್ಕಾರಯುಕ್ತ ಶಿಕ್ಷಣವನ್ನು ನೀಡುತ್ತಿದ್ದು ಸನ್ನಡತೆಯ ಪ್ರಜೆಗಳನ್ನು ರೂಪಿಸುತ್ತಿದೆ. ಸುಮಾರು ೨೦,೦೦೦ ವಿದ್ಯಾರ್ಥಿಗಳು ಪ್ರಸ್ತುತ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿವೇಕಾನಂದ ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಅನೇಕ ಪ್ರತಿಷ್ಠಿತ ಸಂಸ್ಥೆಗಳು ವರ್ಷಂಪ್ರತಿ ನಮ್ಮ ಕ್ಯಾಂಪಸ್‌ಗೆ ಆಗಮಿಸಿ, ಇಲ್ಲಿನ ವಿದ್ಯಾರ್ಥಿಗಳನ್ನು ಆದ್ಯತೆಯ ನೆಲೆಯಲ್ಲಿ ಆಯ್ಕೆ ಮಾಡುತ್ತಿವೆ. ಇದಲ್ಲದೆ ಹೊಸದಾಗಿ ಅಳವಡಿಸಲಾಗಿರುವ ನೂತನ ಪಠ್ಯಕ್ರಮವು ವಿದ್ಯಾರ್ಥಿ ಸ್ನೇಹಿಯಾಗಿದ್ದು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಪಠ್ಯಕ್ರಮದಂತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಈ ಶಿಕ್ಷಣವನ್ನು ಉದ್ಯೋಗದಾತ ಸಂಸ್ಥೆಗಳ ಅವಶ್ಯಕತೆಗೆ ತಕ್ಕಂತೆ ರಚಿಸಲಾಗಿದೆ. ಇತ್ತೀಚೆಗೆ ಅವರು ರಾಜ್ಯದ ಉನ್ನತ ಶಿಕ್ಷಣ ಸಚಿವರನ್ನು ಬೇಟಿಯಾದಾಗಿನ ಸಂದರ್ಭವನ್ನು ನೆನಪಿಸುತ್ತಾ, ಡಿಪ್ಲೋಮಾ ಶಿಕ್ಷಣದ ಬಗ್ಗೆ ಮಾನ್ಯ ಸಚಿವರಿಗಿರುವ ಕಳಕಳಿ ಮತ್ತು ಕಾಳಜಿಯನ್ನು ವಿವರಿಸಿದರು.
ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಬೆಳೆದು ಬಂದ ದಾರಿಯನ್ನು ಸವಿವರವಾಗಿ ತಿಳಿಸುತ್ತಾ, ವಿದ್ಯಾರ್ಜನೆಯ ಜತೆ ಜತೆಗೆ ಸಂಸ್ಥೆಯು ತನ್ನ ಸಾಮಾಜಿಕ ಬದ್ಧತೆಯಾಗಿ ಈ ಭಾಗದಲ್ಲಿ ಮುಂಚೂಣಿಯಲ್ಲಿ ನಿಂತು 20 ಕ್ಕೂ ಹೆಚ್ಚು ಜನೋಪಯೋಗಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳನ್ನು ತೆರೆಸುವಲ್ಲಿ ಯಶಸ್ವಿಯಾಗಿದೆ. ಹಾಗೇನೇ ಸ್ವಾಲಂಬಿ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ನೆರೆಯ ಕಾಸರಗೋಡು ಜಿಲ್ಲೆಯ 20 ಕಡೆಗಳಲ್ಲಿ ಉದ್ಯೋಗ ನೈಪುಣ್ಯ ತರಬೇತಿಗಳನ್ನು ಸಂಘಟಿಸಿ, ಸುಮಾರು 4536 ಜನರಿಗೆ ತರಬೇತಿ ಕೊಟ್ಟು ಹಲವಾರು ಜನ ಉದ್ಯೋಗ ಕಂಡುಕೊಳ್ಳುವಂತೆ ಮಾಡಿದೆ ಹಾಗೂ ಈ ವರೆಗೆ 1500 ಕ್ಕೂ ಮಿಕ್ಕಿ ಜನರು ಸ್ವ ಉದ್ಯೋಗ ಮಾಡುವಂತೆ ಪ್ರೇರೇಪಣೆ ನೀಡಿದೆ. ಇಂತಹ ನೈಪುಣ್ಯ ತರಬೇತಿಯನ್ನು ಮುಂಬರುವ ದಿನಗಳಲ್ಲಿ ಆಸಕ್ತಿ ಇರುವ ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ಪೋಷಕರಿಗೂ ಕೂಡಾ ನೀಡುವ ಗುರಿಯನ್ನು ಹೊಂದಿದೆ. ಈ ಕೌಶಲ್ಯಾಭಿವೃದ್ಧಿ ಬೆಳೆಸಿಕೊಳ್ಳಲು ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ವಹಿಸಿದ್ದರು. ಇವರು ಮಾತನಾಡುತ್ತಾ ಪಾಲಿಟೆಕ್ನಿಕ್‌ನಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಇಂದಿನ ಅವಶ್ಯಕತೆಯಾದ ನೈತಿಕ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸಲಾಗುತ್ತಿದೆ. ಹೊರಗಿನ ಆಕರ್ಷಣೆಗೆ ಒಳಗಾಗಿ ನಿಮ್ಮ ಗುರಿಯನ್ನು ಮರೆಯದಿರಿ ಎಂದು ನೂತನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಉಷಾಕಿರಣ್. ಎಸ್.ಎಂ ನಡೆಸಿಕೊಟ್ಟರು. ಅದೇ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ. ಎಸ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಚಂದ್ರಕುಮಾರ್ ವಂದಿಸಿದರು.