ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ 33 ವರ್ಷ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀಮತಿ ಸರವಣ ಮುತ್ತು ಹಾಗೂ 28 ವರ್ಷಗಳ ಕಾಲ ಕಛೇರಿ ವ್ಯವಸ್ಥಾಪಕರಾಗಿದ್ದ ಶ್ರೀಯುತ ಬಾಲಕೃಷ್ಣ ನಾಯಕ್ ಇವರಿಗೆ ಪಾಲಿಟೆಕ್ನಿಕ್ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅಯೋಜಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ಇವರು ಇಬ್ಬರು ನಮ್ಮ ಸಂಸ್ಥೆಯ ಆಸ್ತಿಯಾಗಿದ್ದಾರೆ, ನಮ್ಮ ಪಾಲಿಟೆಕ್ನಿಕ್ ಇಂದು ರಾಜ್ಯದಲ್ಲೇ ಉತ್ತಮ ಪಾಲಿಟೆಕ್ನಿಕ್ ಎಂದು ಹೆಸರು ಪಡೆಯಲು ಇವರಿಬ್ಬರ ಸೇವೆ ಗಮನಾರ್ಹವಾಗಿದೆ. ಈ ಸಂಸ್ಥೆಯನ್ನು ಮುನ್ನಡೆಸುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಇವರಿಬ್ಬರಿಗೂ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಸಂಚಾಲಕರಾದ ಮಣಿಲ ಮಹಾದೇವ ಶಾಸ್ತ್ರಿ ಇವರು ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಶ್ರೀಮತಿ ಸರವಣ ಮುತ್ತು ಹಾಗೂ ಶ್ರೀಯುತ ಬಾಲಕೃಷ್ಣ ಇವರಿಗೆ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ನುಡಿಮುತ್ತುಗಳನ್ನು ತಿಳಿಸಿ ಅರುವತ್ತರ ನಂತರ ಮರಳಿ ಅರಳಬೇಕು, ಆಸರೆಗೊಂದು ವ್ಯವಸ್ಥೆ, ಕೇಳಲಿಕ್ಕೊಂದು ಕಿವಿ ಇದ್ದರೆ ಬದುಕು ನೆಮ್ಮದಿಯಾಗಿರುತ್ತದೆ ಎಂದರು.
ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿಯವರು ಮಾತನಾಡುತ್ತಾ, ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ ಮುಂದಿನ ಜೀವನವನ್ನು ನಮ್ಮದಾಗಿ ಕಳೆಯೋಣ. ಇಬ್ಬರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ. ತಮಗೆ ಬಯಸಿದ್ದು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.
ಸೇವಾ ನಿವೃತ್ತಿ ಹೊಂದುತ್ತಿರುವ ಶ್ರೀಮತಿ ಸರವಣ ಮುತ್ತು ಹಾಗೂ ಶ್ರೀಯುತ ಬಾಲಕೃಷ್ಣ ನಾಯಕ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ಮುರಳೀಧರ ಎಸ್, ಹಿರಿಯ ಉಪನ್ಯಾಸಕರಾದ ಶ್ರೀಮತಿ ಜಯಲಕ್ಷ್ಮಿ, ಶ್ರೀ ಗುರುಪ್ರಸನ್ನ ಹಾಗೂ ಕಛೇರಿ ಸಿಬ್ಬಂದಿಗಳಾದ ಶ್ರೀಮತಿ ಜಯಂತಿ, ಶ್ರೀಮತಿ ಶ್ರೀಲತ ಇವರು ಸೇವಾ ನಿವೃತ್ತರೊಂದಿಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿವೇಕಾನಂದ ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಸದಸ್ಯರುಗಳಾದ ಶ್ರೀ ಸೂರ್ಯನಾಥ ಆಳ್ವ, ಶ್ರೀ ಕೆ.ಟಿ.ಮುರಳಿ, ಶ್ರೀಮತಿ ತ್ರಿವೇಣಿ ಪೆರುವೊಡಿ, ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಕಛೇರಿ ಸಹಾಯಕಿ ಶ್ರೀಮತಿ ಉಷಾ ಕುಮಾರಿ ಪ್ರಾರ್ಥಿಸಿದರು. ಸಿವಿಲ್ ವಿಭಾಗ ಮುಖ್ಯಸ್ಥರಾದ ಶ್ರೀ ರವಿರಾಮ್ ಎಸ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ರೋಹಿತ್ ಹೆಚ್ ಪಿ ಧನ್ಯವಾದ ಸಮರ್ಪಿಸಿದರು.