ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಸಾರವನ್ನು ಕಲಿಸುವ ಸಾಧಕರು ನಾವಾಗಬೇಕು ಅಚ್ಚ್ಯುತನಾಯಕ್
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಪ್ರಶಿಕ್ಷಣ ಘಟಕ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಇದರ ಸಹಯೋಗದೊಂದಿಗೆ ಸಂಸ್ಥೆಯ ಪ್ರಯೋಗಾಲಯ ನಿರ್ವಾಹಕರು ಹಾಗೂ ಸಹಾಯಕರ ಪುನಶ್ಚೇತನ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿಗಳಾದ ಎಂ. ಕೃಷ್ಣ ಭಟ್ ಮಾತನಾಡಿ, ವಿವೇಕಾನಂದ ವಿದ್ಯಾವರ್ದಕ ಸಂಘ ಒಂದು ಪ್ರಯೋಗಶಾಲೆ. ಈ ಪ್ರಯೋಗಶಾಲೆಯ ಪ್ರಯೋಗಾಲಯಗಳ ಸಿಬ್ಬಂದಿಗಳು ನೀವೆಲ್ಲಾ, ವಿದ್ಯಾರ್ಥಿಗಳ ವಿದ್ಯಾರ್ಜನೆಯ ದೃಷ್ಟಿಯಿಂದ ನಿಮ್ಮೆಲ್ಲರ ಪಾತ್ರ ಬಹುಮುಖ್ಯವಾದುದು. ವಿದ್ಯಾರ್ಥಿಗಳಿಗೆ ತುಂಬಾ ಹತ್ತಿರ ಇರುವವರು ಪ್ರಯೋಗಾಲಯ ಸಹಾಯಕರು. ಮನಸ್ಸನ್ನು ಪುನಶ್ಚೇತನಗೊಳಿಸಲು ಇಂತಹ ಕಾರ್ಯಗಾರಗಳು ಸಹಕಾರಿಯಾಗಲಿದೆ ಎಂದರು. ಸಭಾ ಕಾರ್ಯಕ್ರಮದ ಗೌರವ ಉಪಸ್ಥಿತರಾದ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಚ್ಯುತ ನಾಯಕ್ ಮಾತನಾಡಿ ವಿವೇಕಾನಂದ ವಿದ್ಯಾವರ್ದಕ ಸಂಘಕ್ಕೆ ನಿರ್ದಿಷ್ಟವಾದ ಉದ್ದೇಶವಿದೆ. ಇವತ್ತಿನ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಸಾರವನ್ನು ಕಲಿಸುವ ಅನಿವಾರ್ಯತೆ ಇದೆ. ಇದರಲ್ಲಿ ಪ್ರಯೋಗಾಲಯ ನಿರ್ವಾಹಕರ ಪಾತ್ರ ಕೂಡ ಬಹುಪ್ರಮುಖವಾದುದು. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ ಮಾತನಾಡುತ್ತಾ ಸಂಸ್ಥೆಯ ರೂಪುರೇಶೆ ಬದಲಾದರೂ ನಮ್ಮ ಉದ್ದೇಶ ಬದಲಾಗಬಾರದು ಎಂದರು. ಸಂಸ್ಥೆಯ ಪ್ರಾರಂಭದ ದಿನಗಳನ್ನು ಮತ್ತು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಅಧ್ಯಾಪಕರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕಾರ್ಯಕ್ರಮವು ಮೂರು ಅವಧಿಗಳಲ್ಲಿ ಮುಂದುವರಿಯಿತು.
ಮೊದಲನೇ ಅವಧಿಯನ್ನು ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್ ನಡೆಸಿಕೊಟ್ಟರು. ಇವರು ತಮ್ಮ ಅವಧಿಯಲ್ಲಿ ವಿಶ್ವ ವಿಜೇತ ಭಾರತದ ಇತಿಹಾಸದ ಬಗ್ಗೆ, ಸ್ವಾತಂತ್ರ್ಯ ಪೂರ್ವ ಭಾರತದ ಇತಿಹಾಸ ಹಾಗೂ ಸ್ವಾತಂತ್ರ್ಯ ನಂತರದ ಭಾರತದ ಇತಿಹಾಸದ ಬಗ್ಗೆ ಸಿಬ್ಬಂದಿಗಳಿಗೆ ಕೂಲಂಕುಷವಾಗಿ ವಿವರಿಸಿದರು.
ಎರಡನೇ ಅವಧಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ವಿವೇಕಾನಂದ ಪಾಲಿಟೆಕ್ನಿಕ್‌ನ ಸಿವಿಲ್ ವಿಭಾಗ ಮುಖ್ಯಸ್ಥರಾದ ಹಾಗೂ ವಾಸ್ತುತಜ್ಞರಾದ ರವಿರಾಮ್ ಎಸ್ ನಡೆಸಿಕೊಟ್ಟರು. ಈ ಅವಧಿಯು ಸಂವಾದದ ಮೂಲಕ ನೆರವೇರಿತು. ನಾವು ಜ್ಞಾನವನ್ನು ಸಂಪಾದಿಸಬೇಕೇ ಹೊರತು ಹಣಕ್ಕಾಗಿ ದುಡಿಮೆಯೊಂದೆ ನಮ್ಮ ಉದ್ದೇಶವಾಗಿರಬಾರದು. ನಾವು ವಿದ್ಯಾರ್ಥಿಗಳನ್ನು ಯಾವ ರೀತಿ ಶೈಕ್ಷಣಿಕವಾಗಿ ತಯಾರು ಮಾಡುತ್ತೆವೆ ಅದೇ ರೀತಿಯ ಪಲಿತಾಂಶವನ್ನು ನಾವು ವಿದ್ಯಾರ್ಥಿಗಳಿಂದ ನಿರೀಕ್ಷಿಸಬಹುದು ಆದುದರಿಂದ ಪ್ರಯೋಗಾಲಯ ಸಿಬ್ಬಂಧಿಗಳು ಪ್ರಯೋಗಾಲಯ ಬೋಧನೆ ಮತ್ತು ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ನಮ್ಮೆಲ್ಲಾ ಉದ್ದೇಶ ಸಾರ್ಥಕವಾಗುವುದು ಎಂದರು.
ಮೂರನೇ ಅವಧಿಯನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯ ಸಹ ಪ್ರಧಾನ ವ್ಯವಸ್ಥಾಪಕರು ಹಾಗೂ ಕುಟುಂಬ ಪ್ರಭೋಧನ ಸಂಯೋಜಕರಾದ ಗಜಾನನ ಪೈ ನಡೆಸಿಕೊಟ್ಟರು. ಈ ಅವಧಿಯಲ್ಲಿ ‘ನಮ್ಮ ಮನೆ’ ಎಂದರೇನು? ನಮ್ಮ ಮನೆ ಹೇಗಿರಬೇಕು? ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಮನೆಯ ಪಾತ್ರ ಏನು? ಎಂಬುದರ ಬಗ್ಗೆ ಸಹಜ ಉದಾಹರಣೆ ಹಾಗೂ ಪ್ರಯೋಗಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಇವರು ಮಾತನಾಡುತ್ತಾ ಈಗಿನ ಶಿಕ್ಷಣ ಪದ್ಧತಿಯಿಂದ ಮಕ್ಕಳ ಭೌದ್ಧಿಕ ಮಟ್ಟ ಸುಧಾರಿಸಿದೆ, ಈ ಶಿಕ್ಷಣ ಪದ್ಧತಿಯ ವೇಗದೊಂದಿಗೆ ನಾವು ಸೇರಲು ಇಂತಹ ಕಾರ್ಯಗಾರ ಸಹಕಾರಿಯಾಗಲಿಎಂದು ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣ ಘಟಕದ ಸಂಯೋಜಕರಾದ ಶ್ರೀ ಸಂದೇಶ್ ಮಯ್ಯ ಇವರು ಉಪಸ್ಥಿತರಿದ್ದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ. ಎಸ್ ಪ್ರಾರ್ಥಿಸಿದರು. ವಿವೇಕಾನಂದ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುಪ್ರಸನ್ನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.