ದೇವರ ಮೇಲೆ ನಂಬಿಕೆ ಇಟ್ಟು ವಿಜ್ಞಾನದ ಕಡೆಗೆ ನೆಗೆಯುವ ಪ್ರಯತ್ನ ವಿವೇಕಾನಂದ ಪಾಲಿಟೆಕ್ನಿಕ್ ಮಾಡುತ್ತಿದೆ – ಡಾ. ಪ್ರಭಾಕರ ಭಟ್
ಪುತ್ತೂರು: 33 ವರ್ಷಗಳ ಇತಿಹಾಸವನ್ನು ಹೊಂದಿದ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಥಮ ವರ್ಷದ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವು ದಿನಾಂಕ 18-07-2019 ರಂದು ಗಣಪತಿ ಹೋಮ ಹಾಗೂ ಸರಸ್ವತಿ ಪೂಜಾನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು. ಪೂಜಾ ಕಾರ್ಯಕ್ರಮದ ನಂತರ ನಡೆದ ಸಭಾ ಕಾರ್ಯಕ್ರಮವನ್ನು ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾತನಾಡುತ್ತಾ, ದೇವರ ಮೇಲೆ ನಂಬಿಕೆ ಇಟ್ಟು ವಿಜ್ಞಾನದ ಕಡೆಗೆ ನೆಗೆಯುವ ಪ್ರಯತ್ನ ವಿವೇಕಾನಂದ ಪಾಲಿಟೆಕ್ನಿಕ್ ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬ ವಿಜ್ಞಾನಿ ಇದ್ದಾನೆ. ಅವರಿಗೆ ಉತ್ತೇಜನ ನೀಡುವುದರೊಂದಿಗೆ ಉತ್ತಮ ಜೀವನ ಮೌಲ್ಯವನ್ನು ಆಳವಡಿಸುವಂತಹ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ನೀಡುತ್ತಾ ಬಂದಿದೆ. ಹೊಸದಾಗಿ ಸೇರ್ಪಡೆಗೊಂಡಂತಹ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳುತ್ತಾ ಹೆತ್ತವರಿಗೆ ಸಂತೋಷ ಕೊಡುವಂತಹ ಮಕ್ಕಳಾಗಿ ಬೆಳೆಯಿರಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಎನ್ ಭಟ್ ವಹಿಸಿದ್ದರು. ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮರೆತು ಹೊರಗಿನ ಆಕರ್ಷಣೆಗೆ ಮರುಳಾಗದೆ ಗುರಿಯನ್ನು ಮುಟ್ಟುವ ಪ್ರಯತ್ನ ಮಾಡಿ. ಹೆತ್ತವರ ಕನಸನ್ನು ನನಸು ಮಾಡಿ. ವಿವೇಕಾನಂದ ಪಾಲಿಟೆಕ್ನಿಕ್ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಂಸ್ಥೆಯಾಗಿ ಸಮಾಜದಲ್ಲಿ ರೂಪುಗೊಂಡಿದೆ. ಈ ಸಂಸ್ಥೆಯಲ್ಲಿ ಸೇರ್ಪಡೆಗೊಂಡ ನೂತನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲ ಪ್ರಾಸ್ತವಿಕವಾಗಿ ಮಾತನಾಡುತ್ತಾ ಪಾಲಿಟೆಕ್ನಿಕ್ನಲ್ಲಿ ಬಹಳಷ್ಟು ಆವಕಾಶಗಳಿವೆ. ಈ ಶಿಕ್ಷಣದ ಸದುಪಯೋಗ ಪಡೆದು ಹೊಸ ಮಾದರಿಯ ಸಮಾಜಮುಖಿ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಮಾಡುವಂತಾಗಲಿ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆಯಾದ ನಿರ್ಮಾತೃವನ್ನು ಡಾ. ಪ್ರಭಾಕರ ಭಟ್ ಬಿಡುಗಡೆ ಮಾಡಿದರು. ಈ ಸಂಚಿಕೆಯ ಸಂಕ್ಷಿಪ್ತ ವರದಿಯನ್ನು ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾದ ಶ್ರೀಮತಿ ರೇಷ್ಮಾ ಇವರು ವಾಚಿಸಿದರು.
ಸಭಾ ಕಾರ್ಯಕ್ರಮದ ನಂತರ ಪ್ರಾಚಾರ್ಯರು ಹಾಗೂ ವಿವಿಧ ವಿಭಾಗ ಮುಖ್ಯಸ್ಥರಿಂದ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಗೋಪಿನಾಥ್ ಶೆಟ್ಟಿ ಎಂ ಮಾತಾನಾಡುತ್ತಾ, ಪಾಲಿಟೆಕ್ನಿಕ್ನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶವಿದ್ದು ಸಂಸ್ಥೆಯಲ್ಲಿಯೇ ನೇರ ಸಂದರ್ಶನದ ಮೂಲಕ ಹಲವಾರು ಕಂಪೆನಿಗಳು ಉದ್ಯೋಗ ನೀಡಿವೆ. ಇದಲ್ಲದೆ ಇಂಜಿನೀಯರಿಂಗ್ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸುವವರಿಗೂ ಪಾಲಿಟೆಕ್ನಿಕ್ ಭದ್ರ ಬುನಾದಿಯಾಗಿದೆ. ಎಂದರು.
ಪಾಲಿಟೆಕ್ನಿಕ್ನ ವಿದ್ಯಾರ್ಥಿ ಕ್ಷೇಮಾಧಿಕಾರಿ ಚಂದ್ರಕುಮಾರ್ ಇವರು ಕಾಲೇಜಿನ ನಿಯಮಗಳ ಬಗ್ಗೆ ಮತ್ತು ಹೆತ್ತವರ ಜವಾಬ್ದಾರಿಯ ಬಗ್ಗೆ ಕೂಲಂಕುಶವಾಗಿ ತಿಳಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರವಿರಾಮ್ ಎಸ್ ಕಾಲೇಜಿನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ವಿವಿಧ ಪರೀಕ್ಷೆಗಳು ಹಾಗೂ ಹಾಜರಾತಿ ಪದ್ದತಿ ಬಗ್ಗೆ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಮುರಳೀಧರ ಎಸ್ ವಿವರಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ರೋಹಿತ್ ಹೆಚ್. ಪಿ. ಮಾತಾನಾಡುತ್ತಾ ಕಾಲೇಜು ಆವರಣದಲ್ಲಿ ಹಾಗೂ ಹೊರಗೆ ಮೊಬೈಲು ಬಳಕೆಯನ್ನು ವಿದ್ಯಾರ್ಥಿಗಳಿಗೆ ನಿಷೇಧಿಸಿರುವ ಬಗ್ಗೆ ಮಾಹಿತಿ ನೀಡಿದರು. ಈ ಅವಧಿಯು ಶಿಕ್ಷಕರು ಹಾಗೂ ಪೋಷಕರ ಸಂವಾದದ ಮೂಲಕ ನಡೆಯಿತು. ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ಹಾಗೂ ನಿರೂಪಣೆಯನ್ನು ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಉಷಾಕಿರಣ್. ಎಸ್.ಎಂ ನಡೆಸಿಕೊಟ್ಟರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ. ಎಸ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕೊನೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಚಂದ್ರಕುಮಾರ್ ವಂದಿಸಿದರು.