ವಿವೇಕಾನಂದ ಪಾಲಿಟೆಕ್ನಿಕ್ ತನ್ನ ಎರಡೂವರೆ ದಶಕಗಳ ಸಾರ್ಥಕ ಸೇವೆಯ ಸವಿನೆನಪಿನಲ್ಲಿ, ಇಲ್ಲಿನ ಹಿರಿಯರ ಬಹುದಿನಗಳ ಕನಸಿನಂತೆ, ಇಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಿರ್ಮಿಸಿರುವ ತ್ಯಾಜ್ಯ ಜಲ ಸಂಸ್ಕರಣ ಘಟಕದಲ್ಲಿ (Sewage Treatment Plant) ಇದೀಗ ಇಡೀಯ ವಿವೇಕಾನಂದ ವಿದ್ಯಾಲಯಗಳಿಂದ ಮತ್ತು ವಸತಿ ನಿಲಯಗಳಿಂದ ದಿನವೊಂದಕ್ಕೆ ಸುಮಾರು 2,50,000 ಲೀಟರ್ ಕೊಳಚೆ ನೀರು ಹರಿದು ಬರುತ್ತಿದ್ದು, ಅದು ಈ ಘಟಕದಲ್ಲಿ ಸಂಸ್ಕರಣೆಗೊಂಡು ಬಳಸಲು ಯೋಗ್ಯವಾದ ನೀರಾಗಿ ಪರಿವರ್ತಿತವಾಗುತ್ತಿದೆ.
ಕಳೆದ ಸುಮಾರು 50 ವರ್ಷಗಳ ಕಾಲ ಈ ಕೊಳಚೆ ನೀರು ವ್ಯರ್ಥವಾಗಿ ಹರಿದುಹೋಗಿ ಪರಿಸರವನ್ನು ಹಾಳುಮಾಡುತ್ತಿತ್ತು.
ಇದೀಗ ಪ್ರಾಯೋಗಿಕವಾಗಿ ಈ ಘಟಕದಿಂದ ಶುದ್ಧವಾಗಿ ಹೊರಬರುತ್ತಿರುವ ನೀರನ್ನು ಬಳಸಿ, ಈ ಘಟಕದ ಪರಿಸರದಲ್ಲಿ ಬೃಹತ್ ಬಾಳೆ ತೋಟ ಮತ್ತು ತರಕಾರಿ ತೋಟವನ್ನು ನಿರ್ಮಿಸಲಾಗಿದ್ದು, ಪರಿಸರ ಪ್ರಿಯರಿಗೆ ಆಹ್ಲಾದಕರ ತಾಣವಾಗಿ ಕಂಗೊಳಿಸುತ್ತಿದೆ.
ಈ ಬಾಳೆತೋಟದಲ್ಲಿ ಈ ಪರಿಸರದ ಬೆಳೆಗಳಾದ, ರಸಬಾಳೆ, ದೇವುಬಾಳೆ, ನೇಂದ್ರಬಾಳೆ, ಜೈಂಟ್ ಗಾರ್ನರ್, ಚಂದ್ರಬಾಳೆ, ಮೈಸೂರು ತಳಿ, ಕ್ಯಾವಂಡೀಸ್ ಬಾಳೆ ಇತ್ಯಾದಿಗಳನ್ನು ಬೆಳೆಯಲಾಗುತ್ತಿದೆ.
ಪಕ್ಕದಲ್ಲೇ ಇರುವ ತರಕಾರಿ ತೋಪಿನಲ್ಲಿ ಚೀನಿಕಾಯಿ (Pumpkin), ಸೋರೆಕಾಯಿ (Bottle gourd), ತೊಂಡೆಕಾಯಿ (Ivy gouard), ಬೆಂಡೆಕಾಯಿ (Ladies finger), ಹರಿವೆ, ಮರಗೆಣಸು ಮತ್ತು ಪಪ್ಪಾಯಿಗಳನ್ನು ಬೆಳೆಯಲಾಗುತ್ತಿದೆ.
ಇನ್ನೂ ಉಳಿದ ನೀರನ್ನು ಪಕ್ಕದಲ್ಲಿರುವ ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಹಾಯಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಇಡೀಯ ಕ್ಯಾಂಪಸ್ ಆವರಣದಲ್ಲಿರುವ ಎಲ್ಲಾ ಉದ್ಯಾನವನಗಳಿಗೆ ಹಾಗೂ ಗಿಡಮೂಲಿಕೆಗಳ ವನಕ್ಕೆ ಈ ನೀರನ್ನು ಹಾಯಿಸುವ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತದೆ.